ADVERTISEMENT

ನ್ಯಾಯಾಲಯಕ್ಕೆ ಪಾಠ ಹೇಳಬೇಡಿ: ಉದ್ಧವ್‌ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ CJI

ಪಿಟಿಐ
Published 6 ಆಗಸ್ಟ್ 2024, 23:45 IST
Last Updated 6 ಆಗಸ್ಟ್ 2024, 23:45 IST
<div class="paragraphs"><p>ಚಂದ್ರಚೂಡ್</p></div>

ಚಂದ್ರಚೂಡ್

   

ನವದೆಹಲಿ: ‘ಒಂದು ದಿನ ಇಲ್ಲಿ (ನ್ಯಾಯಪೀಠದಲ್ಲಿ) ಕುಳಿತುಕೊಳ್ಳಿ. ಖಂಡಿತ ಓಡಿ ಹೋಗುತ್ತೀರಿ; ಜೀವನ ಪರ್ಯಂತ ಮತ್ತೆ ಇತ್ತ ಕಣ್ಣು ಹಾಯಿಸುವು ದಿಲ್ಲ’–

ಶಿವಸೇನೆ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಸಲ್ಲಿಕೆಯಾದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ಕೋರಿದ ವಕೀಲರನ್ನು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ಅವರು ತರಾಟೆ ತೆಗೆದುಕೊಂಡ ರೀತಿ ಇದು.

ADVERTISEMENT

ಸಿಜೆಐ ಮತ್ತು ನ್ಯಾಯಮೂರ್ತಿ ಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್‌ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠವು, ಮಹಾರಾಷ್ಟ್ರದ ರಾಜಕೀಯ ವ್ಯಾಜ್ಯದ ಕುರಿತು ಸಲ್ಲಿಕೆಯಾದ ಎರಡು ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆ ನಡೆಸಲು ದಿನಾಂಕ ನಿಗದಿ ಮಾಡಿದೆ.

ಈ ಮಧ್ಯೆ ಉದ್ಧವ್‌ ಠಾಕ್ರೆ ಬಣದ ಪರ ವಕೀಲರು, ‘ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ ಅರ್ಜಿಯ ವಿಚಾರಣೆಯನ್ನು  ತುರ್ತಾಗಿ ನಡೆಸಬೇಕು’ ಎಂದು ನ್ಯಾಯಾಲಯವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಿಟ್ಟಾದ ಸಿಜೆಐ, ‘ನ್ಯಾಯಾಲಯಕ್ಕೆ ಪಾಠ ಮಾಡಲು ಬರ ಬೇಡಿ’ ಎಂದು ತೀಕ್ಷ್ಣವಾಗಿ ಹೇಳಿದರು.

‘ಒಂದೇ ಒಂದು ದಿನ ನೀವೇಕೆ ಇಲ್ಲಿ (ನ್ಯಾಯಪೀಠ) ಕುಳಿತು, ನೀವು ಬಯಸಿದ ದಿನಾಂಕವನ್ನು ಕೋರ್ಟ್ ಮಾಸ್ಟರ್‌ಗೆ ತಿಳಿಸಬಾರದು. ಆಗ ಅತಿಯಾಯಿತು ಎಂದು ನಿಮಗೇ ಅನಿಸುತ್ತದೆ. ಕೋರ್ಟ್‌ಗಳ ಮೇಲಿರುವ ಒತ್ತಡವೂ ಅರಿವಿಗೆ ಬರುತ್ತದೆ...ದಯವಿಟ್ಟು ಇಲ್ಲಿ ಒಂದು ದಿನ ಕುಳಿತುಕೊಳ್ಳಿ. ಜೀವನಪರ್ಯಂತ ಮತ್ತೆ ನೀವು ಇತ್ತ ಬರುವುದಿಲ್ಲ’ ಎಂದು ಹೇಳಿದರು.

ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಬಣವೇ ‘ನಿಜವಾದ ಶಿವಸೇನೆ ಪಕ್ಷ’ ಎಂದು ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್‌ ರಾಹುಲ್‌ ನಾರ್ವೇಕರ್ 2022ರಲ್ಲಿ ನೀಡಿದ್ದ ಆದೇಶವನ್ನು ಉದ್ಧವ್ ಠಾಕ್ರೆ ನೇತೃತ್ವದ ಬಣವು ಪ್ರಶ್ನಿಸಿದೆ. 

ಇನ್ನೊಂದೆಡೆ, ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣವೇ ‘ನಿಜವಾದ ಎನ್‌ಸಿಪಿ’ ಎಂದು ನಾರ್ವೇಕರ್ ನೀಡಿದ್ದ ಆದೇಶವನ್ನು ಶರದ್‌ ಪವಾರ್ ನೇತೃತ್ವದ ಬಣ ಪ್ರಶ್ನಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈಚೆಗೆ ಅಜಿತ್‌ ಮತ್ತು 40 ಶಾಕಸರಿಗೆ ನೋಟಿಸ್ ಜಾರಿ ಮಾಡಿದೆ. ಪ್ರತಿಕ್ರಿಯೆ ಸಲ್ಲಿಸಲು 10 ದಿನ ಕಾಲಾವಕಾಶ ನೀಡಿದೆ.

ಭೀಮ್‌ಸೇನಾ ಮುಖಂಡನ ಬಂಧನ

ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನಿಂದ ಆಕ್ರೋಶಗೊಂಡು ಸಾಮಾಜಿಕ ಜಾಲತಾಣದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ಗೆ ಜೀವ ಬೆದರಿಕೆ ಒಡ್ಡಿದ್ದ ಆರೋಪದ ಮೇಲೆ ಮಧ್ಯಪ್ರದೇಶದ ಭೀಮ್‌ಸೇನಾ ಸಂಘಟನೆಯ ಉಸ್ತುವಾರಿ ಪಂಕಜ್‌ ಅತುಲ್‌ಕರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

34 ವರ್ಷದ ಪಂಕಜ್‌ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಜೈಲಿಗೆ ಕಳುಹಿಸಲಾಯಿತು ಎಂದು ಗಂಜ್‌ ಪೊಲೀಸ್‌ ಠಾಣಾಧಿಕಾರಿ ರವಿಕಾಂತ್‌ ದಹೇರಿಯಾ ತಿಳಿಸಿದರು.

ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ, ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಸೋಮವಾರ ಪ್ರಕರಣ ದಾಖಲಿಸಲಾಗಿತ್ತು.

ಸಿಸೋಡಿಯಾಗೆ ಜಾಮೀನು: ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ನವದೆಹಲಿ (ಪಿಟಿಐ): ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಎಎಪಿ ನಾಯಕ ಮನೀಷ್‌ ಸಿಸೋಡಿಯಾ ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಕಾಯ್ದಿರಿಸಿದೆ. ಇದೆ ವೇಳೆ ಈ ಪ್ರಕರಣದ ತನಿಖೆಯನ್ನು ‘ಯಾವಾಗ ಕೊನೆಗೊಳಿಸುತ್ತೀರಿ’ ಎಂದು ನ್ಯಾಯಾಲಯವು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯವನ್ನು (ಇ.ಡಿ) ಪ್ರಶ್ನಿಸಿದೆ.

‘ಈ ಪ್ರಕರಣದಲ್ಲಿ 493 ಸಾಕ್ಷಿಗಳಿವೆ. ಇದರಲ್ಲಿ ನೀವು ಶೇ 50ರಷ್ಟು ಸಾಕ್ಷಿಗಳನ್ನು ಕೈಬಿಟ್ಟರೂ ಇನ್ನೂ ಸುಮಾರು 250 ಸಾಕ್ಷಿಗಳು ಉಳಿಯಲಿವೆ. ಇಷ್ಟೆಲ್ಲಾ ಸಾಕ್ಷಿಗಳ ವಿಚಾರಣೆ ನಡೆಸುವುದು ವಾಸ್ತವದಲ್ಲಿ ಸಾಧ್ಯವಿದೆಯೇ? ನೀವು ಇದನ್ನೆಲ್ಲಾ ಯಾವಾಗ ಅಂತ್ಯಗೊಳಿಸುತ್ತೀರಿ ಎಂದು ನಿಮಗೆ ಅನ್ನಿಸುತ್ತದೆ ಎಂದು ಹೇಳಿ’ ಎಂದು ನ್ಯಾಯಮೂರ್ತಿಗಾಳದ ಬಿ.ಆರ್‌. ಗವಾಯಿ ಹಾಗೂ ಕೆ.ವಿ. ವಿಶ್ವನಾಥನ್‌ ಅವರು ಹೆಚ್ಚುವರಿಗೆ ಸಾಲಿಸಿಟರ್‌ ಜನರಲ್‌ ಸಿ.ವಿ.ರಾಜು ಅವರನ್ನು ಪ್ರಶ್ನಿಸಿದರು.

‘ಸಿಬಿಐ ಹಾಗೂ ಇ.ಡಿ. ದಾಖಲಿಸಿರುವ ಪ್ರಕರಣಗಳಲ್ಲಿ ಕ್ರಮವಾಗಿ ಎಂಟು ಪ್ರಮುಖ ಸಾಕ್ಷಿಗಳಿವೆ’ ಎಂದು ರಾಜು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ‘ಯಾವಾಗ ವಿಚಾರಣೆ ಆರಂಭಿಸುತ್ತೀರಿ’ ಎಂದು ಪ್ರಶ್ನಿಸಿತು. ‘ಒಂದು ತಿಂಗಳಲ್ಲಿ ಆರೋಪಪಟ್ಟಿ ಸಲ್ಲಿಸಲಿದ್ದೇವೆ. ಆ ಬಳಿಕ ಸಾಕ್ಷಿಗಳ ವಿಚಾರಣೆ ನಡೆಸಲಿದ್ದೇವೆ’ ಎಂದು ರಾಜು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.