ADVERTISEMENT

ಸುಪ್ರೀಂ ಕೋರ್ಟ್ ಪೀಠಗಳಿಗೆ ಹೊಸ ರೋಸ್ಟರ್ ನಿಗದಿ

ಪಿಟಿಐ
Published 14 ನವೆಂಬರ್ 2024, 13:32 IST
Last Updated 14 ನವೆಂಬರ್ 2024, 13:32 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್‌ ಖನ್ನಾ ಅವರು ಹೊಸ ಪ್ರಕರಣಗಳ ವಿಚಾರಣೆಯನ್ನು 16 ಪೀಠಗಳಿಗೆ ಹಂಚಿಕೆ ಮಾಡಲು ನೂತನ ರೋಸ್ಟರ್‌ ಸಿದ್ಧಪಡಿಸಿದ್ದಾರೆ.

ಸಿಜೆಐ ಮತ್ತು ಇತರ ಇಬ್ಬರು ಹಿರಿಯ ನ್ಯಾಯಮೂರ್ತಿಗಳು ಕ್ರಮವಾಗಿ ಮೊದಲ ಮೂರು ಪೀಠಗಳ ನೇತೃತ್ವ ವಹಿಸಲು ನಿರ್ಧರಿಸಲಾಗಿದೆ. ಈ ಪೀಠಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಮತ್ತು ಪತ್ರಗಳ ಮೂಲಕ ಬಂದ ಅರ್ಜಿಗಳ ವಿಚಾರಣೆ ನಡೆಸಲಿವೆ.

ADVERTISEMENT

ಸಿಜೆಐ ಅವರ ಆದೇಶದ ಅಡಿಯಲ್ಲಿ ಹೊಸ ಪ್ರಕರಣಗಳ ಹಂಚಿಕೆಯನ್ನು ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಯಲ್ಲಿ ಪ್ರಕಟಿಸಲಾಗಿದ್ದು, ನವೆಂಬರ್‌ 11ರಿಂದ ಜಾರಿಗೆ ಬಂದಿದೆ.

ನಾಗರಿಕರು ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದು ಸಲ್ಲಿಸುವ ಅರ್ಜಿಗಳು ಮತ್ತು ಪಿಐಎಲ್‌ಗಳ ವಿಚಾರಣೆಯನ್ನು ಸಿಜೆಐ, ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಹಾಗೂ ಸೂರ್ಯಕಾಂತ ಅವರ ನೇತೃತ್ವದ ಪೀಠಗಳು ನಡೆಸಲಿವೆ.

ಸಿಜೆಐ ನೇತೃತ್ವದ ಪೀಠವು ಪಿಐಎಲ್‌ಗಳ ಜತೆ ಸಾಮಾಜಿಕ ನ್ಯಾಯ, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಆಯ್ಕೆಗೆ ನಡೆಯುವ ಚುನಾವಣೆಗೆ ಸಂಬಂಧಿಸಿದ ವಿವಾದಗಳು, ಸಂಸದರು ಮತ್ತು ಶಾಸಕರ ಚುನಾವಣೆ, ಹೇಬಿಯಸ್‌ ಕಾರ್ಪಸ್‌ ಅರ್ಜಿಗಳು ಒಳಗೊಂಡಂತೆ ಗರಿಷ್ಠ ಪ್ರಕರಣಗಳನ್ನು ನಿಭಾಯಿಸಲಿದೆ. ಸೂರ್ಯಕಾಂತ ನೇತೃತ್ವದ ಪೀಠ ಕೂಡಾ ಚುನಾವಣೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಲಿದೆ. 

ಈ ಹಿಂದಿನ ಸಿಜೆಐ ಡಿ.ವೈ.ಚಂದ್ರಚೂಡ್‌ ಅವರೊಂದಿಗೆ ಪೀಠವನ್ನು ಹಂಚಿಕೊಂಡಿದ್ದ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಅವರು ಸಿವಿಲ್‌ ಪ್ರಕರಣಗಳ ಜತೆ ನೇರ ಮತ್ತು ಪರೋಕ್ಷ ತೆರಿಗೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.