ನವದೆಹಲಿ: ‘ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಪರಿಸ್ಥಿತಿ ದಯನೀಯವಾಗಿದೆ. ಇಲ್ಲಿ ಗುಣಮಟ್ಟದ ಚರ್ಚೆಯ ಕೊರತೆಯಿದೆ. ಇದರಿಂದಾಗಿ, ಕಾನೂನುಗಳ ಹಲವು ಅಂಶಗಳು ಅಸ್ಪಷ್ಟವಾಗಿ ಇರುತ್ತವೆ. ಹೀಗಾಗಿ ನ್ಯಾಯಾಲಯಗಳ ಮೇಲಿನ ಹೊರೆಯು ಇನ್ನಷ್ಟು ಹೆಚ್ಚಾಗುತ್ತಿದೆ’ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಭಾನುವಾರ ಹೇಳಿದರು.
ಸುಪ್ರೀಂಕೋರ್ಟ್‌ನ ಬಾರ್ ಅಸೋಸಿಯೇಷನ್, ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಎನ್.ವಿ. ರಮಣ ಅವರು ರಾಷ್ಟ್ರ ಧ್ವಜಾರೋಹಣ ಮಾಡಿದರು.
ಬಳಿಕ ಮಾತನಾಡಿದ ಅವರು, ‘ಕಾನೂನು ರೂಪಿಸುವ ಪ್ರಕ್ರಿಯೆಯ ಸಂದರ್ಭದಲ್ಲೇ ಸಭೆಗಳು ವಿಸ್ತೃತ ಚರ್ಚೆ ನಡೆಸಿದರೆ, ನ್ಯಾಯಾಲಯಕ್ಕೆ ವ್ಯಾಜ್ಯಗಳನ್ನು ಪರಿಹರಿಸಲು ಅನೂಕೂಲವಾಗುತ್ತದೆ’ ಎಂದರು.
‘ದೇಶದ ಸುದೀರ್ಘ ಸ್ವಾತಂತ್ರ್ಯ ಹೋರಾಟವನ್ನು ವಕೀಲರೇ ಮುನ್ನಡೆಸಿದ್ದರು. ರಾಷ್ಟ್ರಪಿತ ಮಹಾತ್ಮ ಗಾಂಧಿ ಇರಬಹುದು ಅಥವಾ ಬಾಬು ರಾಜೇಂದ್ರ ಪ್ರಸಾದ್ ಇರಬಹುದು. ಅವರು ಕಾನೂನಿನಲ್ಲಿ ಪರಿಣತಿ ಪಡೆದಿದ್ದರು. ಆದರೂ, ದೇಶಕ್ಕಾಗಿ ತಮ್ಮ ಆಸ್ತಿ, ಕುಟುಂಬ ಮತ್ತು ಜೀವನ ತ್ಯಾಗ ಮಾಡಿದರು. ಲೋಕಸಭೆ ಮತ್ತು ರಾಜ್ಯಸಭೆಯ ಮೊದಲ ಸದಸ್ಯರುಗಳಲ್ಲಿ ಹೆಚ್ಚಿನವರು ವಕೀಲರು ಅಥವಾ ಕಾನೂನಿನ ಹಿನ್ನಲೆ ಹೊಂದಿದ್ದವರಾಗಿದ್ದರು. ಆದರೆ, ಈಗ ಸಂಸತ್ತಿನಲ್ಲಿ ಕಾನೂನಿನ ಮೇಲಿನ ಚರ್ಚೆ ಹೇಗೆ ನಡೆಯುತ್ತಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ’ ಎಂದು ಸಿಜೆಐ ರಮಣ ಅಭಿಪ್ರಾಯಪಟ್ಟರು.
‘ಹಿಂದೊಮ್ಮೆ ಸದನದಲ್ಲಿ ಕೈಗಾರಿಕಾ ವಿವಾದಗಳ ಕುರಿತ ಮಸೂದೆ ಮಂಡಿಸಿದ್ದ ವೇಳೆ ವಿಸ್ತೃತ ಚರ್ಚೆ ನಡೆದಿತ್ತು. ಆಗ ತಮಿಳುನಾಡಿನ ಸದಸ್ಯರೊಬ್ಬರು ಈ ಕಾಯ್ದೆ ಕಾರ್ಮಿಕರ ಮೇಲೆ ಹೇಗೆ ಪರಿಣಾಮ ಬೀರಬಹುದೆಂದು ವಿಸ್ತಾರವಾಗಿ ವಿವರಿಸಿದ್ದರು. ಇಂತಹ ಗುಣಮಟ್ಟದ ಚರ್ಚೆಗಳು ನ್ಯಾಯಾಲಯದ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ’ ಎಂದು ಅವರು ಹೇಳಿದರು.
‘ಆದರೆ, ಈಗ ಪರಿಸ್ಥಿತಿಯೇ ಬೇರೆಯಿದೆ. ಸದನದಲ್ಲಿ ಕಾನೂನಿಗೆ ಸಂಬಂಧಿಸಿದ ಚರ್ಚೆಯ ಕೊರತೆಯಿಂದ ಹಲವು ರೀತಿ ಗೊಂದಲಗಳು ಉಂಟಾಗುತ್ತಿವೆ. ಶಾಸನ ಸಭೆಗಳ ಉದ್ದೇಶವೇನೆಂಬುದೇ ತಿಳಿಯುತ್ತಿಲ್ಲ. ಇದರಿಂದ ಜನರಿಗೂ ತೊಂದರೆ ಉಂಟಾಗುತ್ತದೆ. ಸಂಸತ್ ಮತ್ತು ವಿಧಾನಸಭೆಗಳಲ್ಲಿ ಕಾನೂನು ಹಿನ್ನಲೆಯನ್ನು ಹೊಂದಿರುವ ವ್ಯಕ್ತಿಗಳಿಲ್ಲದಿದ್ದರೇ ಇದೇ ರೀತಿಯ ಪರಿಸ್ಥಿತಿ ಸೃಷ್ಟಿಯಾಗುತ್ತದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.