ನವದೆಹಲಿ: ಆಯೋಧ್ಯೆ ರಾಮ ಜನ್ಮಭೂಮಿ–ಬಾಬ್ರಿ ಮಸೀದಿ ವಿವಾದ ಪ್ರಕರಣ ಇಂದು ಸಂಜೆ 5ಕ್ಕೆ ಮುಗಿಯಲಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಬುಧವಾರ ಹೇಳಿದರು. ಈ ಹಂತದಲ್ಲಿ ಯಾವುದೇ ಹೊಸ ಅರ್ಜಿಗಳನ್ನು ವಿಚಾರಣೆಗೆ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
‘ಆಗಿದ್ದು ಆಯ್ತು ಅಷ್ಟೇ. ಇಂದು ಸಂಜೆ 5 ಗಂಟೆಗೆ ಈ ಪ್ರಕರಣದ ವಿಚಾರಣೆ ಮುಕ್ತಾಯವಾಗಲಿದೆ’ ಎಂದು ಐವರು ಸದಸ್ಯರಿರುವ ಸಂವಿಧಾನ ಪೀಠದ ಮುಖ್ಯಸ್ಥರೂ ಆಗಿರುವ ಗೊಗೊಯಿ ತುಸು ಸಿಟ್ಟಾಗಿಯೇ ನುಡಿದರು.
ಸಂವಿಧಾನ ಪೀಠವು 39 ದಿನಗಳ ವಾದ–ಪ್ರತಿವಾದ ಆಲಿಸಿದೆ. ಇಂದು ವಿಚಾರಣೆಯ 40ನೇ ದಿನ. ಸಂವಿಧಾನ ಪೀಠದ ಎರಡನೇ ಸುದೀರ್ಘ ಅವಧಿಯ ವಿಚಾರಣೆಯಾಗಿದೆ. 1972ಲ್ಲಿ ಕೇಶವಾನಂದ ಭಾರತಿ ಪ್ರಕರಣದ ವಿಚಾರಣೆಯನ್ನು 13 ನ್ಯಾಯಾಧೀಶರಿದ್ದ ಸಂವಿಧಾನ ಪೀಠವು 68 ದಿನಗಳ ಕಾಲ ನಡೆಸಿತ್ತು. ನಂತರ ಸಂಸತ್ತಿನ ಅಧಿಕಾರಿಗಳ ಬಗ್ಗೆ ತೀರ್ಪು ನೀಡಿತ್ತು.
ಅಯೋಧ್ಯೆ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ನೀಡಿರುವ ತೀರ್ಪು ಪ್ರಶ್ನಿಸಿರುವ 14 ಸಿವಿಲ್ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ಅಯೋಧ್ಯೆಯಲ್ಲಿರುವ ವಿವಾದಾತ್ಮಕ 2.77 ಎಕರೆ ಭೂಮಿಯನ್ನು ಅಲಹಾಬಾದ್ ಹೈಕೋರ್ಟ್ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾಡ ಮತ್ತು ರಾಮ್‌ಲಲ್ಲಾ ಕಕ್ಷಿದಾರರಿಗೆ ಸಮಾನವಾಗಿ ಹಂಚಿಕೆ ಮಾಡಿಕೊಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.