ನವದೆಹಲಿ: ‘ಈಗ ದೇಶದ ನ್ಯಾಯಾಂಗ ವ್ಯವಸ್ಥೆಗೆ ಅತ್ಯಂತ ದೊಡ್ಡ ಅಪಾಯ ಎದುರಾಗಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯ ಹಿರಿಯ ಸ್ಥಾನದಲ್ಲಿ ಕುಳಿತು ನಾನು ಈ ಮಾತು ಹೇಳಬೇಕಾಗಿದೆ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯಿ ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ನಡೆದ ವಿಶೇಷ ವಿಚಾರಣೆಯಲ್ಲಿ ಅವರು ಈ ಮಾತು ಹೇಳಿದ್ದಾರೆ.
‘ದೇಶದಲ್ಲಿ ಅತ್ಯಂತ ದೊಡ್ಡ ಕಚೇರಿಗಳು ಇರುವುದು ಎರಡು ಮಾತ್ರ. ಒಂದು ಪ್ರಧಾನಿ ಕಚೇರಿ ಮತ್ತು ಇನ್ನೊಂದು ಮುಖ್ಯನ್ಯಾಯಮೂರ್ತಿಯ ಕಚೇರಿ. ಈಗ ಮುಖ್ಯನ್ಯಾಯಮೂರ್ತಿ ಕಚೇರಿಯ ಅಧಿಕಾರವನ್ನು ನಿಷ್ಕ್ರಿಯಗೊಳಿಸಲು ಅವರು (ಸಂಚುಕೋರರು) ಯತ್ನಿಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.
‘ಒಬ್ಬ ಸಾಮಾನ್ಯ ಕಿರಿಯ ಸಹಾಯಕಿಯಿಂದ ಇಂತಹ ಸಂಚು ರೂಪಿಸಲು ಸಾಧ್ಯವಿಲ್ಲ. ಇದರ ಹಿಂದೆ ಅತ್ಯಂತ ದೊಡ್ಡ ಶಕ್ತಿಗಳಿವೆ’ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
‘ನನ್ನ ಖಾತೆಯಲ್ಲಿ ಕೇವಲ ₹ 6.8 ಲಕ್ಷ ಇದೆ. ನನ್ನ ಭವಿಷ್ಯ ನಿಧಿಯಲ್ಲಿ ₹ 40 ಲಕ್ಷ ಇದೆ. ನನ್ನ ಆಸ್ತಿ ಇಷ್ಟೆ. ಹಣದ ವಿಚಾರದಲ್ಲಿ ನನ್ನನ್ನು ಸಿಲುಕಿಸಲು ಸಾಧ್ಯವಿಲ್ಲ. ಹೀಗಾಗಿ ಇಂತಹ ವಿಚಾರದಲ್ಲಿ ನನ್ನನ್ನು ಸಿಲುಕಿಸಲು ಯತ್ನಿಸಲಾಗಿದೆ. ನ್ಯಾಯಮೂರ್ತಿಯಾಗಿ 20 ವರ್ಷ ಸೇವೆ ಸಲ್ಲಿಸಿದ್ದಕ್ಕೆ ನನಗೆ ಸಿಕ್ಕ ಬಹುಮಾನವಿದು’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
‘ಇಂತಹ ಪರಿಸ್ಥಿತಿಯಲ್ಲಿ ಕೆಲಸ ಮಾಡಬೇಕಿರುವುದರಿಂದಲೇ ಯಾರೂ ಈ ಕೆಲಸಕ್ಕೆ (ನ್ಯಾಯಮೂರ್ತಿ) ಬರಲು ಬಯಸುವುದಿಲ್ಲ. ಆದರೆ ನಾನು ಯಾವುದಕ್ಕೂ ಹೆದರುವುದಿಲ್ಲ. ನಿರ್ಭಯವಾಗಿ ಕೆಲಸ ಮಾಡುತ್ತೇನೆ. ನನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
‘ಆರೋಪದ ವಿಚಾರ ಎಲ್ಲೆ ಮೀರಿ ಹೋಗಿದೆ. ನ್ಯಾಯಾಂಗ ವ್ಯವಸ್ಥೆಯನ್ನು ಬಲಿಪಶು ಮಾಡಲು ಬಿಡಬಾರದು. ಹೀಗಾಗಿಯೇ ವಿಶೇಷ ವಿಚಾರಣೆ ನಡೆಸುವಂತಹ ಅಸಾಮಾನ್ಯ ನಿರ್ಧಾರವನ್ನು ನಾನು ತೆಗೆದುಕೊಳ್ಳಬೇಕಾಯಿತು’ ಎಂದು ಅವರು ಹೇಳಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪೀಠದ ನಿಲುವನ್ನು ನ್ಯಾಯಮೂರ್ತಿ ಅರುಣ್ ಮಿಶ್ರಾ ತಿಳಿಸಿದರು. ‘ಈ ವಿಚಾರದಲ್ಲಿ ನ್ಯಾಯಾಲಯವು ಯಾವುದೇ ತೀರ್ಪನ್ನು ನೀಡುವುದಿಲ್ಲ. ಈ ಆರೋಪಗಳು ನ್ಯಾಯಾಲಯದ ಘನತೆಗೆ ಮತ್ತು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತವೆ. ಈ ವಿಚಾರದಲ್ಲಿ ಏನನ್ನು ಪ್ರಕಟಿಸಬೇಕು ಮತ್ತು ಏನನ್ನು ಪ್ರಕಟಿಸಬಾರದು ಎಂಬುದನ್ನು ಮಾಧ್ಯಮಗಳ ವಿವೇಚನೆಗೆ ಬಿಟ್ಟಿದ್ದೇವೆ. ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ವಿಚಾರಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಅವನ್ನು ತೆಗೆಯಬೇಕೇ, ಬೇಡವೇ ಎಂಬುದನ್ನೂ ಮಾಧ್ಯಮಗಳ ವಿವೇಚನೆಗೆ ಬಿಡಲಾಗಿದೆ’ ಎಂದು ಅವರು ಹೇಳಿದ್ದಾರೆ.
ಸಂತ್ರಸ್ತೆ ವಿರುದ್ಧ ವಂಚನೆ ಪ್ರಕರಣ
ಸುಪ್ರೀಂ ಕೋರ್ಟ್‌ನಲ್ಲಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ ₹ 50 ಸಾವಿರ ಪಡೆದು, ಅದನ್ನು ಹಿಂತಿರುಗಿಸದೇ ಇರುವುದರ ಸಂಬಂಧ ಸಂತ್ರಸ್ತೆ ವಿರುದ್ಧ ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಹಣ ನೀಡಿದವರಿಗೆ ಜೀವಬೆದರಿಕೆ ಒಡ್ಡಿದ ಸಂಬಂಧವೂ ಪ್ರಕರಣ ದಾಖಲಾಗಿದೆ.
ಎರಡನೇ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಮಾರ್ಚ್ 10ರಂದು ಬಂಧಿಸಲಾಗಿತ್ತು. ಮಾರ್ಚ್ 12ರಂದು ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅವರ ಜಾಮೀನನ್ನು ರದ್ದುಪಡಿಸಬೇಕು ಎಂದು ಪೊಲೀಸರು ಈಗ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅದರ ವಿಚಾರಣೆ ಇದೇ 24ರಂದು ನಡೆಯಲಿದೆ. ಸಂತ್ರಸ್ತೆ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆಯೂ ರಂಜನ್ ಗೊಗೊಯಿ ಮಾತನಾಡಿದ್ದಾರೆ.
ಸಂತ್ರಸ್ತೆಯ ಪತ್ರದ ಸಾರ
‘2018ರ ಅ.11ರಂದು ಸಿಜೆಐ ತಮ್ಮ ಗೃಹ ಕಚೇರಿಯಲ್ಲಿ ನನ್ನ ಸೊಂಟ ಬಳಸಿ ತಬ್ಬಿಕೊಂಡರು. ನನ್ನನ್ನು ಸ್ಪರ್ಶಿಸಿ, ತಮ್ಮ ದೇಹವನ್ನು ನನಗೆ ಒತ್ತಿದರು. ಎರಡನೇ ಬಾರಿ ಹಾಗೆ ಮಾಡಿದಾಗ ನಾನು ಅವರನ್ನು ತಳ್ಳಿದೆ. ಆಗ ಅವರ ಹಣೆ ಪುಸ್ತಕದ ಕಪಾಟಿಗೆ ತಗುಲಿತು. ಆದರೆ ಅನುಮತಿ ಪಡೆಯದೆ ಒಂದೇ ಒಂದು ದಿನ ರಜೆ ಪಡೆದಿದ್ದಕ್ಕೆ ನನ್ನನ್ನು ಕೆಲಸದಿಂದ ವಜಾ ಮಾಡಲಾಯಿತು. ಹೆಡ್ ಕಾನ್‌ಸ್ಟೆಬಲ್‌ಗಳಾಗಿದ್ದ ನನ್ನ ಪತಿ ಮತ್ತು ಅವರ ಸೋದರನನ್ನುಹಳೇ ಪ್ರಕರಣದಲ್ಲಿ ಕೆಲಸದಿಂದ ವಜಾ ಮಾಡಲಾಯಿತು.
ನನ್ನ ತಮ್ಮನನ್ನೂ ಸುಪ್ರೀಂ ಕೋರ್ಟ್‌ನ ಅಟೆಂಡೆಂಟ್ ಕೆಲಸದಿಂದ ವಜಾ ಮಾಡಲಾಯಿತು. ಈ ಕಿರುಕುಳ ಇಷ್ಟಕ್ಕೇ ನಿಲ್ಲಲಿಲ್ಲ. ಸಿಜೆಐ ಅವರ ಪತ್ನಿ ನನ್ನನ್ನು ಜನವರಿಯಲ್ಲಿ ಅವರ ಮನೆಗೆ ಕರೆಸಿಕೊಂಡಿದ್ದರು. ಮಂಡಿಯೂರಿ, ನನ್ನ ಮೂಗಿನಿಂದ ಅವರ ಪಾದವನ್ನು ಸ್ಪರ್ಶಿಸಿ ಕ್ಷಮೆ ಕೋರಲು ಆಗ್ರಹಿಸಿದರು. ನನ್ನ ಕುಟುಂಬದ ಸುರಕ್ಷತೆಗಾಗಿ ನಾನು ಹಾಗೆ ಮಾಡಿದೆ. ಆಗ ಸಿಜೆಐ ಅಲ್ಲಿ ಇರಲಿಲ್ಲ’ ಎಂದು ಸಂತ್ರಸ್ತೆ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಮೋದಿ, ರಾಹುಲ್ ಪ್ರಕರಣ ವಿಚಾರಣೆ
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠವು ಈ ವಾರಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ನಡೆಸಬೇಕಿದೆ. ಇಂತಹ ಸಂದರ್ಭದಲ್ಲೇ ತಮ್ಮ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಬಂದಿರುವುದಕ್ಕೆ ಗೊಗೊಯಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜೀವನಕಥೆಯನ್ನು ಆಧರಿಸಿದ ‘ಪಿಎಂ ನರೇಂದ್ರ ಮೋದಿ’ ಚಲನಚಿತ್ರದ ಪ್ರದರ್ಶನ ತಡೆಗೆ ಸಂಬಂಧಿಸಿದ ವಿಚಾರಣೆ ಈ ವಾರ ನಡೆಯಬೇಕಿದೆ.ರಫೇಲ್ ಪ್ರಕರಣದಲ್ಲಿ ಮೋದಿ ಅವರನ್ನು ‘ಚೌಕೀದಾರ್ ಚೋರ್’ ಎಂದಿದ್ದ ರಾಹುಲ್ ಗಾಂಧಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿದೆ. ಇದರ ವಿಚಾರಣೆಯೂ ಈ ವಾರ ನಡೆಯಬೇಕಿದೆ.
**
ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯ 16ನೇ ಸೆಕ್ಷನ್ ಪ್ರಕಾರ ಯಾರ ಹೆಸರನ್ನೂ ಬಹಿರಂಗಪಡಿಸುವಂತಿಲ್ಲ. ಆದರೆ ಸುದ್ದಿ ಜಾಲತಾಣಗಳು ನಿರ್ಬಂಧವೇ ಇಲ್ಲದಂತೆ ಎಲ್ಲರ ಹೆಸರು ಪ್ರಕಟಿಸಿವೆ.
-ಕೆ.ಕೆ.ವೇಣುಗೋಪಾಲ್, ಅಟಾರ್ನಿ ಜನರಲ್
**
ಯಾವುದೇ ವ್ಯಕ್ತಿ ಒಬ್ಬ ನ್ಯಾಯಮೂರ್ತಿಯಾಗಿ ಸಂಪಾದಿಸಲು ಸಾಧ್ಯವಾಗುವುದು ಗೌರವವನ್ನು ಮಾತ್ರ. ಆ ಗೌರವಕ್ಕೇ ಧಕ್ಕೆಯಾದರೆ ಮತ್ತೇನು ಉಳಿದಿದೆ?
-ರಂಜನ್ ಗೊಗೊಯಿ, ಸಿಜೆಐ
**
ಇದು ಆಧಾರವಿಲ್ಲದ ಆರೋಪ. ಇಂಥದ್ದನ್ನು ಪ್ರೋತ್ಸಾಹಿಸಬಾರದು. ನ್ಯಾಯಾಂಗ ವ್ಯವಸ್ಥೆಗೆ ಮಸಿ ಬಳಿಯಲು ಹೀಗೆಮಾಡಲಾಗಿದೆ. ನಾವು ಸಿಜೆಐ ಪರವಾಗಿ ನಿಲ್ಲುತ್ತೇವೆ.
-ಭಾರತೀಯ ವಕೀಲರ ಸಂಘ
**
ಈ ಆರೋಪ ಸುಳ್ಳು ಎಂದಾದರೆ, ಅದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಒದಗಿರುವ ಅತ್ಯಂತ ದೊಡ್ಡ ಅಪಾಯ. ಆರೋಪ ನಿಜವಾದರೆ, ಅದೂ ಅತ್ಯಂತ ಗಂಭೀರವಾದ ವಿಚಾರ.
-ವಿಕಾಸ್ ಸಿಂಗ್, ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.