ADVERTISEMENT

ಜೆಎನ್‌ಯು ಘರ್ಷಣೆ: ಎಬಿವಿಪಿ ಸದಸ್ಯರ ವಿರುದ್ಧ ಪ್ರಕರಣ ದಾಖಲು

ಪಿಟಿಐ
Published 11 ಏಪ್ರಿಲ್ 2022, 5:24 IST
Last Updated 11 ಏಪ್ರಿಲ್ 2022, 5:24 IST
   

ನವದೆಹಲಿ: ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಗುಂಪಿನಿಂದ ಪಡೆದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಸೋಮವಾರ ಎಬಿವಿಪಿ ಸಂಘಟನೆಯ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಕಾವೇರಿ ಹಾಸ್ಟೆಲ್‌ನಲ್ಲಿ ರಾಮನವಮಿಯಂದು ಮಾಂಸಾಹಾರದ ವಿಚಾರವಾಗಿ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿತ್ತು. ಹಿಂಸಾಚಾರದಲ್ಲಿ ಆರು ವಿದ್ಯಾರ್ಥಿಗಳು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

‘ಜೆಎನ್‌ಯುಎಸ್‌ಯು, ಎಸ್‌ಎಫ್‌ಐ, ಡಿಎಸ್‌ಎಫ್ ಮತ್ತು ಎಐಎಸ್‌ಎ ಸದಸ್ಯರಾಗಿರುವ ವಿದ್ಯಾರ್ಥಿಗಳ ಗುಂಪು ಅಪರಿಚಿತ ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದೆ. ಅದರಂತೆ, ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ವಾಸ್ತವ ಅರಿಯಲು, ಅಪರಾಧಿಗಳನ್ನು ಗುರುತಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ. ಎಬಿವಿಪಿಗೆ ಸೇರಿದ ವಿದ್ಯಾರ್ಥಿಗಳೂ ದೂರು ನೀಡುವುದಾಗಿ ತಿಳಿಸಿದ್ದಾರೆ. ನಂತರ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ದೆಹಲಿ ನೈರುತ್ಯ ಪೊಲೀಸ್ ಉಪ ಆಯುಕ್ತ ಮನೋಜ್ ಸಿ ತಿಳಿಸಿದ್ದಾರೆ.

ADVERTISEMENT

ಹಿಂಸಾಚಾರಕ್ಕೆ ಸಂಬಂಧಿಸಿದ್ದು ಎನ್ನಲಾದ ಹಲವು ವಿಡಿಯೊಗಳು ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಒಂದು ವಿಡಿಯೊದಲ್ಲಿ ವಿದ್ಯಾರ್ಥಿ ಅಖ್ತರಿಸ್ತಾ ಅನ್ಸಾರಿ ಎಂಬುವವರ ತಲೆಗೆ ಪೆಟ್ಟುಬಿದ್ದು ರಕ್ತಸ್ರಾವವಾಗುತ್ತಿರುವುದು ಕಂಡು ಬಂದಿದೆ. ಆದರೆ, ಈ ವಿಡಿಯೊಗಳ ಸತ್ಯಾಸತ್ಯತೆಯನ್ನು ಅಧಿಕಾರಿಗಳು ಖಚಿತಪಡಿಸಿಲ್ಲ.

ಎಬಿವಿಪಿ ಸದಸ್ಯರು ಹಾಸ್ಟೆಲ್‌ನಲ್ಲಿ ಮಾಂಸಾಹಾರ ಸೇವಿಸದಂತೆ ವಿದ್ಯಾರ್ಥಿಗಳನ್ನು ತಡೆದು ಹಿಂಸಾತ್ಮಕ ವಾತಾವರಣ ಸೃಷ್ಟಿಸಿದ್ದಾರೆ ಎಂದು ವಿ.ವಿ.ಯವಿದ್ಯಾರ್ಥಿ ಸಂಘ (ಜೆಎನ್‌ಯುಎಸ್‌ಯು) ಆರೋಪಿಸಿದೆ. ಆದರೆ ಎಬಿವಿಪಿ ಈ ಆರೋಪವನ್ನು ನಿರಾಕರಿಸಿದೆ. ರಾಮನವಮಿ ನಿಮಿತ್ತ ಹಾಸ್ಟೆಲ್‌ನಲ್ಲಿ ಏರ್ಪಡಿಸಿದ್ದ ಪೂಜೆಗೆ ಎಡ ಪಂಥೀಯರು ಅಡ್ಡಿಪಡಿಸಿದ್ದಾರೆ ಎಂದು ಆಪಾದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.