ನವದೆಹಲಿ: ತೀಸ್ ಹಜಾರಿ ಕೋರ್ಟ್ ಆವರಣದಲ್ಲಿ ಶನಿವಾರ ಮತ್ತು ಸಾಕೇತ್ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಪೊಲೀಸರ ಮೇಲೆ ವಕೀಲರು ದಾಳಿ ನಡೆಸಿದ ಪ್ರತ್ಯೇಕ ಘಟನೆಗಳು ನಡೆದಿದ್ದವು.
ವಕೀಲರು ಹಲ್ಲೆ ನಡೆಸಿದ್ದನ್ನು ಖಂಡಿಸಿ ಸಾವಿರಾರು ಪೊಲೀಸ್ ಸಿಬ್ಬಂದಿ ಮಂಗಳವಾರ ದೆಹಲಿ ಪೊಲೀಸ್ ಮುಖ್ಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು.ಮಂಗಳವಾರ ರಾತ್ರಿ, ಹಿರಿಯ ಅಧಿಕಾರಿಗಳು ಬಂದು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಬಳಿಕ ಪೊಲೀಸರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ಇದನ್ನೂ ಓದಿ:ವಾಚಕರವಾಣಿ | ವಕೀಲರು-ಪೊಲೀಸರ ಸಂಘರ್ಷ ಆಘಾತಕಾರಿ
ತೀಸ್ ಹಜಾರಿ ಕೋರ್ಟ್ ಆವರಣದಲ್ಲಿ ನಡೆದಿದ್ದೇನು?
ನವೆಂಬರ್ 2 ಶನಿವಾರ ಮಧ್ಯಾಹ್ನ ವಕೀಲರ ಗುಂಪೊಂದು ತೀಸ್ ಹಜಾರಿ ಕೋರ್ಟ್ ಆವರಣದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದೆ. ಪೊಲೀಸರು ನಿಂತುಕೊಂಡಿದ್ದಾಗ ವಕೀಲರ ಗುಂಪೊಂದು ಒಳಗೆ ನುಗ್ಗಿ ಹಲ್ಲೆ ನಡೆಸಿದೆ. ವಿಡಿಯೊ ದೃಶ್ಯದಲ್ಲಿ ಪೊಲೀಸರಿಗೆ ವಕೀಲರು ಹಿಗ್ಗಾಮುಗ್ಗ ಹೊಡೆಯತ್ತಿದ್ದಾರೆ. ಅದರಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಮೇಲೆ ವಕೀಲರ ಗುಂಪು ಹಲ್ಲೆ ನಡೆಸುತ್ತಿದ್ದು ಪೊಲೀಸ್ ಸಿಬ್ಬಂದಿನೆಲದಲ್ಲಿ ಬಿದ್ದಿರುವ ದೃಶ್ಯ ಕಾಣಿಸುತ್ತಿದೆ.
ಇದನ್ನೂ ಓದಿ:ದೆಹಲಿ: ಬೀದಿಗಿಳಿದ ಪೊಲೀಸರು
ಜಗಳಕ್ಕೆ ಕಾರಣವೇನು?
ಪಾರ್ಕಿಂಗ್ ವಿಷಯದಲ್ಲಿ ಜಗಳ ಶುರುವಾಗಿತ್ತು. ಈ ಜಗಳದಲ್ಲಿ17 ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪೊಲೀಸ್ ದಾಳಿಯಲ್ಲಿ ನಾಲ್ವರುವಕೀಲರಿಗೆ ಗಾಯಗಳಾಗಿವೆ ಎಂದು ವಕೀಲರು ಹೇಳುತ್ತಿದ್ದು ಪೊಲೀಸರು ಈ ಆರೋಪ ತಳ್ಳಿಹಾಕಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಗೆ ದೆಹಲಿ ಹೈಕೋರ್ಟ್ ಆದೇಶಿದ್ದು, ಮುಂದಿನ6 ವಾರಗಳೊಳಗೆ ತನಿಖಾ ವರದಿ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಆದೇಶಿಸಿದೆ. ತಪ್ಪಿತಸ್ಥಪೊಲೀಸರನ್ನು ತಕ್ಷಣವೇ ಅಮಾನತು ಮಾಡಲು ದೆಹಲಿ ಪೊಲೀಸ್ ಆಯುಕ್ತರಿಗೆ ಕೋರ್ಟ್ ಹೇಳಿತ್ತು.
ವಕೀಲರು ನಡೆಸಿದ ಹಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ (ಉತ್ತರ ವಲಯ) ಹರಿಂದರ್ ಕುಮಾರ್ ಮತ್ತು ಕೊತ್ವಲಿ, ಸಿವಿಲ್ ಲೈನ್ಸ್ ಸ್ಟೇಷನ್ ಹೌಸ್ ಅಧಿಕಾರಿಗಳು ಸೇರಿದಂತೆ 10 ಪೊಲೀಸರಿಗೆ ಗಾಯಗಳಾಗಿವೆ.
8 ಪೊಲೀಸ್ ಬೈಕ್, ಒಂದು ವ್ಯಾನ್ ಮತ್ತು ಇತರ ಎಂಟು ವಾಹನಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ವಕೀಲರೊಬ್ಬರು ನ್ಯಾಯಾಲಯಕ್ಕೆ ಬರುವಾಗ ಪೊಲೀಸ್ ವಾಹನವೊಂದು ಡಿಕ್ಕಿ ಹೊಡೆದಿದೆ ಎಂದುತೀಸ್ ಹಜಾರಿ ಬಾರ್ ಅಸೋಸಿಯೇಷನ್ ಪದಾಧಿಕಾರಿ ಜೈ ಬಿಸ್ವಾಲ್ ಹೇಳಿರುವುದಾಗಿಎಎನ್‌ಐ ವರದಿ ಮಾಡಿದೆ.
ಇದನ್ನು ಆ ವಕೀಲ ಪ್ರಶ್ನಿಸಿದಾಗ ಆರು ಪೊಲೀಸರು ವಕೀಲನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ಪೊಲೀಸರನ್ನು ಕರೆದಾಗ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದರೂ ಅವರನ್ನು ಒಳಗೆ ಪ್ರವೇಶಿಸಲು ಬಿಡಲಿಲ್ಲ.
ನಾವು ಹೈಕೋರ್ಟ್‌ಗೆ ಮಾಹಿತಿ ನೀಡಿದಾಗ 6 ನ್ಯಾಯಮೂರ್ತಿಗಳ ತಂಡವನ್ನು ಕಳಿಸಿಕೊಟ್ಟಿದ್ದರೂ ಅವರನ್ನು ಒಳಗೆ ಪ್ರವೇಶಿಸಲು ಬಿಡಲಿಲ್ಲ. ಅವರು ಮರಳಿದಾಗ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಬಿಸ್ವಾಲ್ ಹೇಳಿದ್ದಾರೆ.
ಇದನ್ನೂ ಓದಿ:ಹಲ್ಲೆ ವಿರುದ್ಧ ಸಿಡಿದೆದ್ದ ದೆಹಲಿ ಪೊಲೀಸ್
ಪೊಲೀಸರು ವಕೀಲರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತೀಸ್ ಹಜಾರಿ ಬಾರ್ ಅಸೋಸಿಯೇಷನ್ ಕಾರ್ಯದರ್ಶಿ ಜೈವೀರ್ ಸಿಂಗ್ ಚೌಹಾಣ್ ಆರೋಪಿಸಿದ್ದಾರೆ. ಇದು ಪೊಲೀಸರ ಅಸಡ್ಡೆಯಿಂದ ನಡೆದ ಘಟನೆ ಎಂದು ಚೌಹಾಣ್ ಹೇಳಿದ್ದಾರೆ.
ತೀಸ್ ಹಜಾರಿ ನ್ಯಾಯಾಲಯದ ಆವರಣಲ್ಲಿ ಪೊಲೀಸರು ವಕೀಲರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದನ್ನು ನಾವು ಖಂಡಿಸುತ್ತೇವೆ ಎಂದು ಬಾರ್ ಕೌನ್ಸಿಲ್ ಆಫ್ ದೆಹಲಿ ಅಧ್ಯಕ್ಷ ಕೆ.ಸಿ. ಮಿತ್ತಲ್ ಹೇಳಿದ್ದಾರೆ.
ಲಾಕಪ್‌ನಲ್ಲಿ ಯುವ ವಕೀಲರೊಬ್ಬರಿಗೆ ಪೊಲೀಸರು ಹಿಗ್ಗಾಮುಗ್ಗ ಹೊಡೆದಿದ್ದಾರೆ. ಅವರನ್ನು ವಜಾ ಮಾಡಿ, ಕಾನೂನಿನಡಿ ವಿಚಾರಣೆಗೊಳಪಡಿಸಬೇಕು. ನಾವು ದೆಹಲಿ ವಕೀಲರಿಗೆ ಬೆಂಬಲ ಸೂಚಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಪೊಲೀಸರ ವಿರುದ್ಧ ವಕೀಲರು ಪ್ರತಿಭಟನೆ ನಡೆಸಿ ರಸ್ತೆತಡೆ ನಡೆಸಿದ್ದರು. ಇದರಿಂದ ಸಂಚಾರ ದಟ್ಟಣೆಯುಂಟಾಗಿತ್ತು.
ಸಾಕೇತ್ ನ್ಯಾಯಾಲಯದ ಆವರಣದಲ್ಲಿ ನಡೆದಿದ್ದೇನು?
ಸೋಮವಾರ ನವದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯದ ಹೊರಗಡೆ ಕರ್ತವ್ಯ ನಿರತಾಗಿದ್ದ ಪೊಲೀಸ್ ಸಿಬ್ಬಂದಿ ಮೇಲೆ ವಕೀಲರ ಗುಂಪೊಂದು ಹಲ್ಲೆ ನಡೆಸಿದೆ.ಮೊಟಾರ್ ಬೈಕ್ ಏರಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಪೊಲೀಸ್ ಸಿಬ್ಬಂದಿಮೇಲೆ ವಕೀಲರೊಬ್ಬರು ಮೊಣಕೈಯಿಂದ ಹೊಡೆಯುತ್ತಿರುವ ದೃಶ್ಯ ವಿಡಿಯೊದಲ್ಲಿದೆ . ಆಮೇಲೆ ವಕೀಲ ಪೊಲೀಸ್ ಸಿಬ್ಬಂದಿಯ ಕಪಾಲಕ್ಕೆ ಹಲವು ಬಾರಿಹೊಡೆದು, ಹೆಲ್ಮೆಟ್ ಬಿಸಾಡಿದ್ದಾರೆ. ಈ ಹಲ್ಲೆಯ ವಿಡಿಯೊ ಸೋಮವಾರ ವೈರಲ್ ಆಗಿತ್ತು.
ಇದಾದನಂತರ ಮಂಗಳವಾರ ದೆಹಲಿ ಪೊಲೀಸರು ಬೃಹತ್ ಪ್ರತಿಭಟನೆ ನಡೆಸಿದ್ದರು. ದೆಹಲಿ ಪೊಲೀಸ್ ಇಲಾಖೆಯ ಇತಿಹಾಸದಲ್ಲಿ ಪೊಲೀಸರು ಪ್ರತಿಭಟನೆ ನಡೆಸಿದ್ದು ಇದೇ ಮೊದಲು. ಹಿರಿಯ ಅಧಿಕಾರಿ ಸ್ಥಳಕ್ಕೆ ಬಂದು, ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದರೂ ಅದನ್ನು ಕಡೆಗಣಿಸಿದರು. ಸಂಜೆಯ ವೇಳೆಗೆ ಪೊಲೀಸರ ಕುಟುಂಬದವರು ಸಹ ಇಂಡಿಯಾ ಗೇಟ್ ಬಳಿ ಸೇರಿ ಪ್ರತಿಭಟನೆಯ ಕಾವನ್ನು ಹೆಚ್ಚಿಸಿದರು. ಸಂಜೆ ಪೊಲೀಸ್ ಮುಖ್ಯ ಕಚೇರಿಯ ಮುಂದೆ ಕ್ಯಾಂಡಲ್‌ಗಳನ್ನು ಹಿಡಿದು ಪೊಲೀಸರು ಪ್ರತಿಭಟನೆ ನಡೆಸಿದರು.
ರಾತ್ರಿ, ಹಿರಿಯ ಅಧಿಕಾರಿಗಳು ಬಂದು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಟ್ಟರು. ಗಾಯಗೊಂಡಿರುವ ಸಿಬ್ಬಂದಿಗೆ ₹ 25,000 ಪರಿಹಾರ ನೀಡುವುದಾಗಿ ಅಧಿಕಾರಿ ಘೋಷಿಸಿದರು.
ಅಮಿತ್ ಶಾಗೆ ವರದಿ: ತೀಸ್ ಹಜಾರಿ ಕೋರ್ಟ್ ಆವರಣದಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಇಲಾಖೆ ಗೃಹಸಚಿವ ಅಮಿತ್ ಶಾ ಅವರಿಗೆ ಮಂಗಳವಾರ ವರದಿ ಸಲ್ಲಿಸಿದೆ.‘ಶನಿವಾರ ನಡೆದ ಘಟನೆಯ ವಿವರ ಮತ್ತು ನಂತರ ಕೈಗೊಂಡ ಕ್ರಮಗಳ ವಿವರಗಳನ್ನು ಹೊಂದಿರುವ ವಾಸ್ತವ ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಸೋಮವಾರ ನಡೆದ ಘಟನೆಯ ವಿವರ ವರದಿಯಲ್ಲಿಲ್ಲ’ ಎಂದು ಸಚಿವಾಲಯದ ಅಧಿಕಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.