ನವದೆಹಲಿ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಸಂತ್ರಸ್ತರ ಮೇಲೆ ದೌರ್ಜನ್ಯ ನಡೆದಿರುವ ಹಲವು ನಿದರ್ಶನಗಳು ಸ್ಥಳ ತನಿಖೆಯಲ್ಲಿ ಬಹಿರಂಗವಾಗಿವೆ. ಇದು ಆಡಳಿತದ ನಿರ್ಲಕ್ಷ್ಯದಿಂದಾದ ಮಾನವ ಹಕ್ಕುಗಳ ಉಲ್ಲಂಘನೆ ಎನ್ನುವುದು ಸ್ಪಷ್ಟವಾಗಿ ತೋರುತ್ತಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಶನಿವಾರ ಹೇಳಿದೆ.
ಕಾನೂನು ಮೇಲಿನ ನಂಬಿಕೆ ಮತ್ತು ಅಧಿಕಾರಿಗಳ ಮೇಲಿನ ವಿಶ್ವಾಸವನ್ನು ಮರುಸ್ಥಾಪಿಸುವುದು, ಕಾನೂನುಬದ್ಧ ಮಾಲೀಕರಿಗೆ ಜಮೀನು ಮರಳಿಸುವುದು, ಸಂದೇಶ್‌ಖಾಲಿಯಿಂದ ಕಾಣೆಯಾದ ಮಹಿಳೆಯರು, ಬಾಲಕಿಯರ ಪ್ರಕರಣಗಳ ತನಿಖೆ ನಡೆಸುವುದು ಒಳಗೊಂಡಿರುವ ಪ್ರತಿ ಶಿಫಾರಸುಗಳ ಬಗ್ಗೆ ಕ್ರಮ ತೆಗೆದುಕೊಂಡ ವರದಿಯನ್ನು ಎಂಟು ವಾರಗಳಲ್ಲಿ ಸಲ್ಲಿಸುವಂತೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗೆ ಎನ್‌ಎಚ್‌ಆರ್‌ಸಿ ಸೂಚಿಸಿದೆ.
ಆರೋಪಿಗಳು ನಡೆಸಿರುವ ದೌರ್ಜನ್ಯದಿಂದಾಗಿ ಸಂದೇಶ್‌ಖಾಲಿಯಲ್ಲಿನ ವಾತಾವರಣವು ಸಂತ್ರಸ್ತರನ್ನು ಮೌನವಾಗಿಸಿದೆ ಮತ್ತು ನ್ಯಾಯ ಪಡೆಯಲು ಹಿಂಜರಿಯುವಂತೆ ಮಾಡಿದೆ ಎಂದು ಎನ್‌ಎಚ್‌ಆರ್‌ಸಿಯ ತನಿಖಾ ತಂಡದ ವರದಿಯಲ್ಲಿ ಹೇಳಲಾಗಿದೆ.
ಸಂತ್ರಸ್ತರ ಮನಸಿನಲ್ಲಿರುವ ಆರೋಪಿಗಳ ಮೇಲಿನ ಭಯ ಕಿತ್ತುಹಾಕಿ ಅವರು ತಮ್ಮ ಕುಟುಂಬಗಳೊಂದಿಗೆ ಬಾಳಲು ಮತ್ತು ಸಮಾಜದಲ್ಲಿ ಘನತೆಯಿಂದ ಬದುಕಲು ಆತ್ಮವಿಶ್ವಾಸ ತುಂಬಬೇಕಾದ ಅಗತ್ಯವನ್ನು ತನಿಖಾ ತಂಡ ಕಂಡುಕೊಂಡಿದೆ.ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
ಹಲ್ಲೆ, ಬೆದರಿಕೆ, ಲೈಂಗಿಕ ಶೋಷಣೆ, ಭೂ ಕಬಳಿಕೆ ಮತ್ತು ಬಲವಂತದ ಕೂಲಿ ಮಾಡಿಸಿ ಗ್ರಾಮಸ್ಥರು ಮತ್ತು ಸಂತ್ರಸ್ತರು ಸಂದೇಶ್‌ಖಾಲಿ ತೊರೆದು, ಬೇರೆಡೆ ಜೀವನೋಪಾಯ ಅರಸುವಂತೆ ಮಾಡಲಾಗಿದೆ. ಇದಲ್ಲದೆ, ಇಲ್ಲಿನ ಜನರಿಗೆ ವೃದ್ಧಾಪ್ಯ ವೇತನ, ಪಡಿತರ ಹಾಗೂ ನರೇಗಾ ಕೂಲಿ ಕೆಲಸ ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದು, ಇದು ತೀವ್ರ ಕಳವಳಕಾರಿ ಎಂದು ತನಿಖಾ ತಂಡ ವರದಿಯಲ್ಲಿ ಹೇಳಿದೆ.
ಅಧಿಕಾರ ದಬ್ಬಾಳಿಕೆಯಿಂದಾಗಿ ಸಂತ್ರಸ್ತರು ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಧಿಕಾರ ದುರುಪಯೋಗವು ಜನರು ದ್ವನಿ ಎತ್ತದ ಭಯದ ವಾತಾವರಣ ಉಂಟು ಮಾಡಿದೆ. ಇದು ಶಾಶ್ವತವಾಗಿ ಉಳಿಯದಂತೆ ನಿವಾರಿಸುವ ಮತ್ತುಸಂತ್ರಸ್ತರು ಮೌನದ ಸಂಕೋಲೆಯಿಂದ ಹೊರಬಂದು ಸುರಕ್ಷಿತವಾಗಿ ಬದುಕುವ ವಾತಾವರಣವನ್ನು ಕಲ್ಪಿಸುವ ಅಗತ್ಯವಿದೆ ಎಂದು ಎನ್‌ಎಚ್‌ಆರ್‌ಸಿ ಒತ್ತಿಹೇಳಿದೆ.
ಸಂತ್ರಸ್ತರಲ್ಲಿ ವಿಶ್ವಾಸ ತುಂಬಲು ನಿರಂತರ ಕ್ರಮಗಳನ್ನು ಕೈಗೊಳ್ಳುವುದು ಜಿಲ್ಲೆಯ ಅಧಿಕಾರಿಗಳ ಕರ್ತವ್ಯವಾಗಿದೆ. ಇದರಿಂದಾಗಿ, ಆರೋಪಿಗಳ ದೌರ್ಜನ್ಯಕ್ಕೆ ತುತ್ತಾದ ಇತರರು ಮುಂದೆ ಬಂದು ತಮ್ಮ ದೂರುಗಳನ್ನು ಸಲ್ಲಿಸಬಹುದು ಎಂದು ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.