ನವದೆಹಲಿ: ಹವಾಮಾನ ಬದಲಾವಣೆ ವಿದ್ಯಮಾನವನ್ನು ನಿರ್ಲಕ್ಷ್ಯ ಮಾಡುವುದು ಸಲ್ಲ. ಪರಿಸರಕ್ಕೆ ಇಂಗಾಲ ಸೇರುವ ಪ್ರಮಾಣವನ್ನು ತಗ್ಗಿಸುವುದಕ್ಕಾಗಿ ‘ಪರಿಸರ ಸ್ನೇಹಿ ಜೀವನ ಶೈಲಿ’ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮಂಗಳವಾರ ಹೇಳಿದರು.
ಇಲ್ಲಿನ ಕರಕರಡೂಮಾ ಮತ್ತು ರೋಹಿಣಿ ಪ್ರದೇಶಗಳಲ್ಲಿ ವಿಚಾರಣಾ ನ್ಯಾಯಾಲಯಗಳ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ಬೀಸಿದ ಬಿಸಿ ಗಾಳಿ ನಂತರ ಸುರಿದ ಭಾರಿ ಮಳೆ ಕುರಿತು ಪ್ರಸ್ತಾಪಿಸಿದರು.
‘ಈ ವರ್ಷ ದೆಹಲಿಯಲ್ಲಿ ಗರಿಷ್ಠ ತಾಪಮಾನ ದಾಖಲಾಗಿತ್ತು. ಬಿಸಿಗಾಳಿಯಿಂದಲೂ ನಾವು ತತ್ತರಿಸಿದೆವು. ಅದರ ಬೆನ್ನಲ್ಲೇ ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಮಳೆ ಸುರಿಯಿತು. ನಮ್ಮ ಮೂಲಸೌಕರ್ಯಗಳು ನಮ್ಮ ಬದುಕಿನ ವಸ್ತುಸ್ಥಿತಿಯನ್ನು ಹೇಳುತ್ತವೆ. ಹೀಗಾಗಿ, ಹವಾಮಾನ ಬದಲಾವಣೆಯನ್ನು ಇನ್ನು ನಿರ್ಲಕ್ಷ್ಯ ಮಾಡಬಾರದು’ ಎಂದು ಅವರು ಪ್ರತಿಪಾದಿಸಿದರು.
‘ಹವಾಮಾನ ಬದಲಾವಣೆ ತಡೆಗಟ್ಟುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ನಾವು ಪರಿಸರ ಸ್ನೇಹಿ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು. ಇಂಗಾಲದ ಹೊರಸೂಸುವಿಕೆ ಪ್ರಮಾಣ ತಗ್ಗಿಸುವುದು ಸಹ ಇಂತಹ ಜೀವನಶೈಲಿಯ ಭಾಗವಾಗಿದೆ’ ಎಂದರು.
ನ್ಯಾಯಾಂಗ ವ್ಯವಸ್ಥೆ ಕುರಿತು ಪ್ರಸ್ತಾಪಿಸಿದ ಅವರು, ‘ನ್ಯಾಯಾಲಯಗಳು ಕೇವಲ ಸಾರ್ವಭೌಮ ಅಧಿಕಾರ ಚಲಾಯಿಸುವ ಸ್ಥಳಗಳಲ್ಲ; ಅವು ಜನರಿಗೆ ಸೇವೆ ಒದಗಿಸುವಂತಹ ತಾಣಗಳೂ ಆಗಿವೆ’ ಎಂದರು.
‘ನಮ್ಮ ಕಾನೂನು ಮತ್ತು ಸಾಂವಿಧಾನಿಕ ವ್ಯವಸ್ಥೆಯು ಮೂಲಭೂತವಾಗಿ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮೌಲ್ಯಗಳ ಮೇಲೆ ನಿಂತಿದೆ’ ಎಂದೂ ಹೇಳಿದರು.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಹಿಮಾ ಕೊಹ್ಲಿ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ, ದೆಹಲಿ ಹೈಕೋರ್ಟ್‌ನ ಹಂಗಾಮಿ ಮುಖ್ಯನ್ಯಾಯಮೂರ್ತಿ ಮನಮೋಹನ್, ಸಚಿವೆ ಆತಿಶಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.