ADVERTISEMENT

‘ಗಡಿಯಾರ’ ಚಿಹ್ನೆ: ಜಾಹೀರಾತುಗಳ ವಿವರ ಸಲ್ಲಿಸಲು ಸುಪ್ರೀಂ ಕೋರ್ಟ್‌ ಸೂಚನೆ

ಪಿಟಿಐ
Published 3 ಏಪ್ರಿಲ್ 2024, 13:41 IST
Last Updated 3 ಏಪ್ರಿಲ್ 2024, 13:41 IST
<div class="paragraphs"><p>  ಸುಪ್ರೀಂ ಕೋರ್ಟ್</p><p> </p></div>

ಸುಪ್ರೀಂ ಕೋರ್ಟ್

   

–ಪಿಟಿಐ ಚಿತ್ರ

ADVERTISEMENT

ನವದೆಹಲಿ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ನೇತೃತ್ವದ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಬಣಕ್ಕೆ, ‘ಗಡಿಯಾರ’ ಚಿಹ್ನೆಗೆ ಸಂಬಂಧಿಸಿದಂತೆ ತಾನು ಈ ಹಿಂದೆ ನೀಡಿದ್ದ ಆದೇಶದ ಅನುಸಾರ ಹೊರಡಿಸಲಾದ ಪತ್ರಿಕಾ ಜಾಹೀರಾತುಗಳ ವಿವರಗಳನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಬುಧವಾರ ಸೂಚಿಸಿದೆ.

‘ಗಡಿಯಾರ’ ಚಿಹ್ನೆಯ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಆ ಚಿಹ್ನೆಯ ಬಳಕೆಯು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಇಂಗ್ಲಿಷ್‌, ಹಿಂದಿ ಮತ್ತು ಮರಾಠಿ ಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸುವಂತೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ನೇತೃತ್ವದ ಬಣಕ್ಕೆ ಸುಪ್ರೀಂ ಕೋರ್ಟ್‌ ಮಾರ್ಚ್‌ 19ರಂದು ನಿರ್ದೇಶಿಸಿತ್ತು.

ಚುನಾವಣೆ ಕುರಿತ ಎಲ್ಲ ರೀತಿಯ ಜಾಹೀರಾತು, ಬ್ಯಾನರ್‌, ಪೋಸ್ಟರ್‌ಗಳಂತಹ ಪ್ರಚಾರ ಸಾಮಗ್ರಿಗಳಲ್ಲಿ ಅಜಿತ್‌ ಬಣವು ಇದೇ ರೀತಿಯ ಘೋಷಣೆಗಳನ್ನು ಮಾಡಬೇಕು ಎಂದು ಅದು ಹೇಳಿತ್ತು.

ಆದರೆ, ಅಜಿತ್‌ ಪವಾರ್‌ ಬಣವು ನ್ಯಾಯಾಲಯದ ಈ ನಿರ್ದೇಶನ ಪಾಲಿಸುತ್ತಿಲ್ಲ. ಈ ಕುರಿತು ಜಾಹೀರಾತುಗಳಲ್ಲಿ ಘೋಷಣೆಗಳನ್ನು ಮಾಡುತ್ತಿಲ್ಲ ಎಂದು ‘ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ– ಶರದ್‌ಚಂದ್ರ ಪವಾರ್’ ಬಣದ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ನ್ಯಾಯಾಲಯಕ್ಕೆ ತಿಳಿಸಿದರು.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌, ಕೆ.ವಿ.ವಿಶ್ವನಾಥನ್‌ ಅವರ ಪೀಠವು, ಮಾರ್ಚ್‌ 19ರಂದು ಹೊರಡಿಸಿದ್ದ ಆದೇಶದ ಬಳಿಕ ಪ್ರಕಟಿಸಲಾಗಿರುವ ಜಾಹೀರಾತುಗಳ ವಿವರ ಸಲ್ಲಿಸಿ, ಅದನ್ನು ಗಮನಿಸಬೇಕಿದೆ ಎಂದು ಅಜಿತ್‌ ಪವಾರ್‌ ಬಣದ ಪರ ವಾದಿಸಿದ ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರಿಗೆ ಸೂಚಿಸಿತು. ‘ನಮ್ಮ ಆದೇಶವನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸುವ ಹಕ್ಕು ಯಾರಿಗೂ ಇಲ್ಲ’ ಎಂದು ಪೀಠ ಹೇಳಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.