ಡೆಹ್ರಾಡೂನ್, ಉತ್ತರಾಖಂಡ: ‘ರಾಯಪುರದ ಸರ್ಖೆತ್ ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ 2:15ಕ್ಕೆ ಮೇಘಸ್ಫೋಟ ಸಂಭವಿಸಿದೆ. ಇದರಿಂದ ನದಿಗಳಲ್ಲಿ ನೀರಿನ ರಭಸ ಹೆಚ್ಚಾಗಿದ್ದು, ಸೇತುವೆಗಳು ಕೊಚ್ಚಿಹೋಗಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಟನ್ಸ್ ನದಿಯ ದಡದಲ್ಲಿರುವ ಪ್ರಸಿದ್ಧ ಶಿವ ದೇವಾಲಯದ ತಪಕೇಶ್ವರ ಗುಹೆಗಳಿಗೂ ನೀರು ನುಗ್ಗಿದ್ದು, ಅಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿದೆ’ ಎಂದು ಅವರು ಹೇಳಿದರು.
‘ಥಾನೋ ಬಳಿ ಸಾಂಗ್ ನದಿಯ ಮೇಲಿನ ಸೇತುವೆ ಕೊಚ್ಚಿಹೋಗಿದ್ದು, ಮಸ್ಸೂರಿ ಸಮೀಪದ ಜನಪ್ರಿಯ ಪ್ರವಾಸಿ ತಾಣವಾದ ಕೆಂಪ್ಟಿ ಜಲಪಾತವೂ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದೆ’ ಎಂದರು.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು, ಥಾನೋ ಬಳಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ವಾಹನ ಸಂಚಾರದ ಪುನರ್ ಸ್ಥಾಪನೆಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ಆಡಳಿತವು ಸಂಪೂರ್ಣ ಜಾಗರೂಕವಾಗಿದೆ. ಈಗಾಗಲೇ ಸಂತ್ರಸ್ತ ಪ್ರದೇಶಗಳಲ್ಲಿ ವಿಪತ್ತು ಪರಿಹಾರ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಅಗತ್ಯವಿದ್ದರೆ ಸೇನೆಯ ಸಹಾಯವನ್ನು ಸಹ ತೆಗೆದುಕೊಳ್ಳಲಾಗುವುದು’ ಎಂದು ಅವರು ಹೇಳಿದರು.
ಧಾಮಿ ಅವರೊಂದಿಗೆ ರಾಯ್‌ಪುರ ಶಾಸಕ ಉಮೇಶ್ ಶರ್ಮಾ ಕೌ ಮತ್ತು ಗರ್ವಾಲ್ ಕಮಿಷನರ್ ಸುಶೀಲ್ ಕುಮಾರ್ ಇದ್ದರು.
ಮೇಘಸ್ಫೋಟದ ನಂತರ ಹತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿನ ಮನೆಗಳಿಗೆ ಕೆಸರು ನುಗ್ಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕಾರ್ಯಾಚರಣೆ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.