ಮುಂಬೈ: ಕ್ಲಬ್‌ಹೌಸ್‌ನಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿಯಾಗಿ ಚರ್ಚೆ ನಡೆಸಿದಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣದ ಮೂವರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.
ಮುಂಬೈ ಅಪರಾಧ ವಿಭಾಗದ ಸೈಬರ್ ಪೊಲೀಸ್ ಠಾಣೆಯ ಸಿಬ್ಬಂದಿ ಗುರುವಾರ ತಡರಾತ್ರಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದೂ ಅವರು ಹೇಳಿದರು.
ಇಬ್ಬರು ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ಅಧಿಕಾರಿ ತಿಳಿಸಿದರು. ಈ ಸಂಬಂಧ ಶಿವಸೇನೆಯರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಬೆಳಗಿನ ಜಾವ ಟ್ವೀಟ್ ಮಾಡಿದ್ದು, ನಗರ ಪೊಲೀಸರ ಕಾರ್ಯವನ್ನು ಪ್ರಶಂಸಿದ್ದಾರೆ.
‘ಮುಂಬೈ ಪೊಲೀಸರಿಗೆ ಅಭಿನಂದನೆಗಳು. ಕ್ಲಬ್‌ಹೌಸ್ ಸಂವಾದ ಪ್ರಕರಣದ ಜಾಡನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ’ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಕ್ಲಬ್‌ಹೌಸ್ ಮತ್ತು ಗೂಗಲ್‌ಗೆ ಬುಧವಾರ ಪತ್ರ ಬರೆದಿದ್ದ ದೆಹಲಿ ಪೊಲೀಸರು ಚರ್ಚಾಕೂಟದ ಆಯೋಜಕರ ಬಗ್ಗೆ ಮಾಹಿತಿ ಕೇಳಿದ್ದರು. ಅದೇ ದಿನ ಸಂವಾದ ನಡೆಸಿದ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಮುಂಬೈ ಮೂಲದ ಸಂಸ್ಥೆಯೊಂದು ನಗರ ಪೊಲೀಸರಿಗೆ ದೂರು ನೀಡಿತ್ತು. ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.