ಭೋಪಾಲ್: ಕ್ಲಬ್ ಹೌಸ್‌ನಲ್ಲಿ ತಮ್ಮ ಮಾತುಗಳು ಸೋರಿಕೆಯಾಗಿವೆ ಎಂದು ಆರೋಪಿಸಿ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ಅವರು ಸೋಮವಾರ ಮಧ್ಯಪ್ರದೇಶದ ಸೈಬರ್ ಸೆಲ್‌ಗೆ ದೂರು ನೀಡಿದ್ದಾರೆ.
‘ಕ್ಲಬ್ ಹೌಸ್‌ನಲ್ಲಿ ಜಮ್ಮು–ಕಾಶ್ಮೀರದ ಕುರಿತು ನಾನು ಆಡಿದ ಮಾತುಗಳನ್ನು ಸಂಗ್ರಹಿಸಿ, ವಿರೂಪಗೊಳಿಸಿ ಹಂಚಿಕೊಳ್ಳಲಾಗಿದೆ. ಈ ಸಂಬಂಧ ಮಧ್ಯಪ್ರದೇಶದ ಸೈಬರ್ ಸೆಲ್‌ಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ (ಐಟಿ) ಅಡಿಯಲ್ಲಿ ದೂರು ದಾಖಲಿಸಿದ್ದೇನೆ’ ಎಂದು ದಿಗ್ವಿಜಯ್ ಸುದ್ದಿಗಾರರಿಗೆ ತಿಳಿಸಿದರು.
‘ಕ್ಲಬ್ ಹೌಸ್‌ನ ಮಾತುಗಳನ್ನು ಹಂಚಿಕೊಂಡ ಮತ್ತು ಪೋಸ್ಟ್ ಅನ್ನು ಮರು ಟ್ವೀಟ್ ಮಾಡಿದವರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗುವುದು. ಕ್ಲಬ್ ಹೌಸ್ ಆ್ಯಪ್‌ನ ಸಂಬಂಧ ಪಟ್ಟವರಿಗೂ ಕಾನೂನು ಪ್ರಕಾರ ನೋಟಿಸ್ ನೀಡುತ್ತೇನೆ. ಈಗಾಗಲೇ ಟ್ವಿಟರ್‌ಗೆ ನೋಟಿಸ್ ಕಳುಹಿಸಿದ್ದೇನೆ’ ಎಂದು ಅವರು ವಿವರಿಸಿದರು.
‘ದಿಗ್ವಿಜಯ್ ಸಿಂಗ್ ಅವರು ಐಟಿ ಕಾಯ್ದೆ ಅಡಿಯಲ್ಲಿ ದೂರು ನೀಡಿದ್ದಾರೆ. ಆದರೆ, ಇದುವರೆಗೆ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ’ ಎಂದು ಮಧ್ಯಪ್ರದೇಶದ ಸೈಬರ್ ಸೆಲ್ ಸೂಪರಿಂಟೆಂಡೆಂಟ್ ಗುರ್‌ಕರಣ್ ಸಿಂಗ್ ಅವರು ಮಾಹಿತಿ ನೀಡಿದ್ದಾರೆ.
‘ತನಿಖೆಯ ನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಪೊಲೀಸರು ಮಾಹಿತಿ ಪಡೆಯಲಿದ್ದಾರೆ’ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.