ADVERTISEMENT

ಕೇಜ್ರಿವಾಲ್‌ ರಾಜೀನಾಮೆಗೆ ಆಗ್ರಹಿಸುತ್ತಿರುವ ಅಮಿತ್‌ ಶಾ ರಾಜೀನಾಮೆ ನೀಡಲಿ: ಎಎಪಿ

ಪಿಟಿಐ
Published 14 ಸೆಪ್ಟೆಂಬರ್ 2024, 13:22 IST
Last Updated 14 ಸೆಪ್ಟೆಂಬರ್ 2024, 13:22 IST
ನವದೆಹಲಿಯ ಕನಂಟ್‌ ಪ್ಲೇಸ್‌ನಲ್ಲಿರುವ ಹನುಮ ಮಂದಿರಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಶನಿವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಕೇಜ್ರಿವಾಲ್‌ ಅವರೊಂದಿಗೆ ಅವರ ಪತ್ನಿ ಸುನಿತಾ, ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ, ಸಂಸದ ಸಂಜಯ್‌ ಸಿಂಗ್‌ ಹಾಗೂ ನಾಯಕ ಸೌರಭ್‌ ಭಾರಧ್ವಾ‌ಜ್‌ ಜೊತೆಗೂಡಿದರು –ಪಿಟಿಐ ಚಿತ್ರ
ನವದೆಹಲಿಯ ಕನಂಟ್‌ ಪ್ಲೇಸ್‌ನಲ್ಲಿರುವ ಹನುಮ ಮಂದಿರಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಶನಿವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಕೇಜ್ರಿವಾಲ್‌ ಅವರೊಂದಿಗೆ ಅವರ ಪತ್ನಿ ಸುನಿತಾ, ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ, ಸಂಸದ ಸಂಜಯ್‌ ಸಿಂಗ್‌ ಹಾಗೂ ನಾಯಕ ಸೌರಭ್‌ ಭಾರಧ್ವಾ‌ಜ್‌ ಜೊತೆಗೂಡಿದರು –ಪಿಟಿಐ ಚಿತ್ರ   

ನವದೆಹಲಿ: ‘ಅರವಿಂದ ಕೇಜ್ರಿವಾಲ್‌ ಅವರನ್ನು ‘ಸುಳ್ಳು’ ಪ್ರಕರಣವೊಂದರಲ್ಲಿ ಸಿಲುಕಿಸಿ ಜೈಲಿಗೆ ಅಟ್ಟಿ, ಈಗ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಅಮಿತ್‌ ಶಾ ಅವರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್‌ ಸಿಂಗ್‌ ಅವರು ಗುಡುಗಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೆಹಲಿ ಮುಖ್ಯಮಂತ್ರಿಯನ್ನು ಜೈಲಿಗೆ ಕಳುಹಿಸಿದ್ದರ ಹಿಂದೆ ಗೃಹ ಸಚಿವರ ಕೈವಾಡವಿದೆ. ಜನರಿಂದ ಚುನಾಯಿತವಾದ ಸರ್ಕಾರವನ್ನು ಅಮಿತ್‌ ಶಾ ಅವರು ಬೀಳಿಸುತ್ತಾರೆ; ಮುಖ್ಯಮಂತ್ರಿಗಳನ್ನು ಜೈಲಿಗೆ ಅಟ್ಟುತ್ತಾರೆ; ರಾಜಕೀಯ ಪಕ್ಷಗಳನ್ನು ವಿಭಜಿಸುತ್ತಾರೆ. ಇಂತಹ ಗೃಹ ಸಚಿವರು ಅಧಿಕಾರದಲ್ಲಿ ಮುಂದುವರೆಯಬಾರದು’ ಎಂದು ಆರೋಪಿಸಿದರು.

‘ಕೇಜ್ರಿವಾಲ್‌ ಅವರು ಯಾವುದೇ ಕಡತಗಳಿಗೆ ಸಹಿ ಹಾಕದಂತೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ ಎಂಬುದಾಗಿ ಬಿಜೆಪಿ ‘ಸುಳ್ಳು’ ಸುದ್ದಿ ಹಬ್ಬಿಸುತ್ತಿದೆ. ಇದಕ್ಕಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಠೇವಣಿ ಕಳೆದುಕೊಳ್ಳುವಂತೆ ದೆಹಲಿಯ ಜನರು ಮಾಡಲಿದ್ದಾರೆ’ ಎಂದರು.

ADVERTISEMENT

‘ಮುಖ್ಯಮಂತ್ರಿ ಬಳಿ ಯಾವುದೇ ಖಾತೆಗಳಿಲ್ಲ. ಆದ್ದರಿಂದ ಅವರು ಯಾವುದೇ ಕಡತಗಳಿಗೆ ಸಹಿ ಹಾಕಬೇಕಾದ ಪ್ರಮೇಯವೇ ಬರುವುದಿಲ್ಲ. ಲೆಫ್ಟಿನೆಂಟ್‌ ಗವರ್ನರ್‌ ಅವರ ಅನುಮೋದನೆಗಾಗಿ ಕಳುಹಿಸಬೇಕಾದ ಕಡತಗಳಿಗೆ ಅವರು ಸಹಿ ಹಾಕಲಿದ್ದಾರೆ. ಇಂಥ ಕಡತಗಳಿಗೆ ಸಹಿ ಹಾಕಲು ಸು‍ಪ್ರೀಂ ಕೋರ್ಟ್‌ ಅವಕಾಶ ನೀಡಿದೆ’ ಎಂದರು.

ಹನುಮನ ದರ್ಶನ ಪಡೆದ ಕೇಜ್ರಿವಾಲ್‌: 

ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಜೈಲಿನಲ್ಲಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಶುಕ್ರವಾರ ಜಾಮೀನಿನ ಮೇಲೆ ಬಿಡುಗಡೆಗೊಂಡರು. ಈ ಬಳಿಕ ಅವರು ಶನಿವಾರ ಕನಾಟ್‌ ಪ್ಲೇಸ್‌ನಲ್ಲಿರುವ ಹನುಮನ ಮಂದಿರಕ್ಕೆ ಭೇಟಿ ನೀಡಿದರು.

ಅರವಿಂದ ಕೇಜ್ರಿವಾಲ್‌ ಅವರು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅಭಿಷೇಕ್‌ಮನು ಸಿಂಘ್ವಿ ಅವರನ್ನು ಶನಿವಾರ ಭೇಟಿ ಮಾಡಿದರು. ಈ ಕುರಿತು ಎಎಪಿ ತನ್ನ ‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ. ‘ಸರ್ವಾಧಿಕಾರಿಯ ಸಂಚಿನ ವಿರುದ್ಧ ಹೋರಾಡಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಕಾನೂನು ಸಹಕಾರ ನೀಡಿದ, ದೇಶದ ಹಿರಿಯ ವಕೀಲ ಅಭಿಷೇಕ್‌ಮನು ಸಿಂಘ್ವಿ ಅವರನ್ನು ಅರವಿಂದ್‌ ಕೇಜ್ರಿವಾಲ್‌ ಹಾಗೂ ಅವರ ಪತ್ನಿ ಸುನೀತಾ ಅವರು ಭೇಟಿ ಮಾಡಿದರು’ ಎಂದು ಪಕ್ಷ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.