ಬೆಂಗಳೂರು: ‘ಕರ್ನಾಟಕದ ಹಾಸನ ಸಂಸದ ಪ್ರಜ್ವಲ್ ರೇವಣ್ಣ (ನಿಮ್ಮ ಮೈತ್ರಿಯ ಅಭ್ಯರ್ಥಿ) ಅವರ ಮೇಲೆ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯರ ಪರವಾಗಿ ಕೊನೆಗೂ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲೆಳೆದಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ವಿಷಯ ಹಂಚಿಕೊಂಡಿರುವ ಅವರು, ‘ಆದರೆ ನಿಮ್ಮ ಈ ಮಾತು ಒಂದೆಡೆ ನಂಬಿಕೆ ಹುಟ್ಟಿಸಿದರೆ, ಹಿಂದಿನ ಕೆಲ ಘಟನೆಗಳಲ್ಲಿನ ನಿಮ್ಮ ನಡವಳಿಕೆ ಮತ್ತು ಮಾತು ಅಗ್ಗದ್ದು ಎಂದು ತೋರಿಸುತ್ತದೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕುಸ್ತಿಪಟುಗಳ ಮೇಲೆ ನಿಮ್ಮದೇ ಪಕ್ಷದ ಸಂಸದ ಲೈಂಗಿಕ ದೌರ್ಜನ್ಯ ಎಸಗಿದಾಗ ನೀವು ಯಾರ ಪರವಾಗಿ ನಿಂತಿದ್ದಿರಿ? ಮಹಿಳಾ ಕ್ರೀಡಾಪಟುಗಳು ದೆಹಲಿಯಲ್ಲಿ ವಾರಗಟ್ಟಲೆ ಧರಣಿ ನಡೆಸಲು ಬಿಟ್ಟಿರಿ. ಅವೆಲ್ಲವನ್ನೂ ಹೇಗೆ ಮರೆಯಲು ಸಾಧ್ಯ’ ಎಂದು ಕುಟುಕಿದ್ದಾರೆ.
‘ಬಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳನ್ನು ನಿಮ್ಮದೇ ಪಕ್ಷ ಆಡಳಿತದಲ್ಲಿರುವ ಗುಜರಾತ್ ಸರ್ಕಾರ ಮಾಲೆ ಹಾಕಿ ಬಿಡುಗಡೆ ಮಾಡಿದ್ದನ್ನು ನಾವು ಹೇಗೆ ಮರೆಯಲು ಸಾಧ್ಯ? ಅಪರಾಧಿಗಳನ್ನು ಮರಳಿ ಸೆರೆಮನೆಗೆ ಕಳುಹಿಸಲು ಮತ್ತೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕಾಯಿತು. ದಲಿತ ಸಮುದಾಯಕ್ಕೆ ಸೇರಿದ ಬಾಲಕಿ ಮೇಲೆ ನಡೆದ ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ನಿಮ್ಮ ಪಕ್ಷವು ಅಪರಾಧಿಗಳ ಬೆನ್ನಿಗೆ ನಿಂತಿದ್ದನ್ನು ಹೇಗೆ ಮರೆಯಲು ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.
‘ಹತ್ರಾಸ್ ಪ್ರಕರಣದಲ್ಲಿ ಅತ್ಯಾಚಾರಿಗಳ ಬೆನ್ನಿಗೆ ನಿಮ್ಮ ಪಕ್ಷ ನಿಂತಿದ್ದನ್ನು ನಾವು ಹೇಗೆ ಮರೆಯಲು ಸಾಧ್ಯ? ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆಸಿದಾಗ ಕುರುಡಾಗಿದ್ದ ಬಿಜೆಪಿಯನ್ನು ಮರೆಯಲು ಸಾಧ್ಯವೇ? ದೇಶದ ಮಹಿಳೆಯರಿಗೆ ಈ ಎಲ್ಲಾ ಸತ್ಯಗಳೂ ತಿಳಿದಿವೆ. ನೈಜತೆ ಅರಿತು ನೀವು ಎಚ್ಚೆತ್ತುಕೊಳ್ಳಬೇಕಾದ ಸಮಯ ಬಂದಿದೆ’ ಎಂದು ಅಮಿತ್ ಶಾಗೆ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.