ಚೆನ್ನೈ: ವಿಧಾನಸಭೆಯಲ್ಲಿ ಅಂಗೀಕಾರವಾದ ಮಸೂದೆಗಳಿಗೆ ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸುವ ವಿಷಯ ಕುರಿತಂತೆ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರೊಂದಿಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಶನಿವಾರ ಸೌಹಾರ್ದ ಸಭೆ ನಡೆಸಿದರು.
ಮಸೂದೆಗಳಿಗೆ ಅಂಕಿತ ಹಾಕದ ಕುರಿತು ನ್ಯಾಯಾಲಯದ ಮೆಟ್ಟಿಲೇರಿದ್ದ ತಮಿಳುನಾಡು ಸರ್ಕಾರದ ಮನವಿಗೆ ಪೂರಕವಾಗಿ, ‘ಮುಖ್ಯಮಂತ್ರಿಯನ್ನು ಭೇಟಿಯಾಗಿ ಸಮಸ್ಯೆ ಪರಿಹರಿಸಿಕೊಳ್ಳಿ‘ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ರಾಜ್ಯಪಾಲರಿಗೆ ಸಲಹೆ ನೀಡಿತ್ತು.
‘ಸೌಹಾರ್ದಯುತವಾಗಿ ನಡೆದ ಈ ಸಭೆಯಲ್ಲಿ ವಿಧಾನಸಭೆಯಲ್ಲಿ ಅನುಮೋದನೆ ಪಡೆದ 10 ಮಸೂದೆಗಳಲ್ಲಿ 9 ಅನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲು ರಾಜ್ಯಪಾಲರು ಒಪ್ಪಿದ್ದಾರೆ’ ಎಂದು ಕಾನೂನು ಮಂತ್ರಿ ಎಸ್.ರಘುಪತಿ ರೆಡ್ಡಿ ಹೇಳಿದ್ದಾರೆ.
‘ಬಾಕಿ ಇರುವ ಮಸೂದೆಗಳ ಜತೆಗೆ, ಎಐಎಡಿಎಂಕೆ ಆಡಳಿತದ ಅವಧಿಯಲ್ಲಿ ಸಚಿವರಾಗಿದ್ದ ಇಬ್ಬರ ವಿರುದ್ಧ ತನಿಖೆ ಕೈಗೊಳ್ಳಲು ಅನುಮತಿ ಹಾಗೂ ಮಾಜಿ ಮುಖ್ಯಮಂತ್ರಿ ಸಿ.ಎನ್.ಅಣ್ಣಾದೊರೈ ಅವರ ಜನ್ಮದಿನೋತ್ಸವ ಸಂದರ್ಭದಲ್ಲಿ 112 ಕೈದಿಗಳನ್ನು ಬಿಡುಗಡೆ ಮಾಡುವ ಪ್ರಸ್ತಾವನೆಯೂ ಒಳಗೊಂಡಿದೆ’ ಎಂದು ಮಾಹಿತಿ ನೀಡಿದರು.
ಹಲವು ವಿಷಯಗಳಲ್ಲಿ ರಾಜ್ಯಪಾಲ ರವಿ ಮತ್ತು ಆಡಳಿತಾರೂಢ ಡಿಎಂಕೆ ಸರ್ಕಾರದ ನಡುವೆ ಘರ್ಷಣೆ ನಡೆದಿತ್ತು. ಸರ್ಕಾರದ ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, ‘ವಿಧಾನಸಭೆಯಲ್ಲಿ ಬಹುಮತದೊಂದಿಗೆ ಅಂಗೀಕಾರವಾದ ಮಸೂದೆಯನ್ನು ರಾಷ್ಟ್ರಪತಿ ಅವರ ಅಂಕಿತಕ್ಕೆ ಕಳುಹಿಸುವ ಬದಲು ಮರುಪರಿಶೀಲಿಸಲು ರಾಜ್ಯಪಾಲರಿಗೆ ಅಧಿಕಾರವಿಲ್ಲ’ ಎಂದು ಹೇಳಿತ್ತು.
ಬಾಕಿ ಉಳಿದ 10 ಮಸೂದೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಭೇಟಿ ಮಾಡಿ ಗೊಂದಲ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸಲಹೆ ನೀಡಿತ್ತು.
ಇದರ ಬೆನ್ನಲ್ಲೇ ರಾಜಭವನಕ್ಕೆ ಬಂದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ರಾಜ್ಯಪಾಲ ರವಿ ಖುದ್ದಾಗಿ ತಾವೇ ಬರಮಾಡಿಕೊಂಡರು. ಇಬ್ಬರೂ ಒಬ್ಬರಿಗೊಬ್ಬರು ಶಾಲು ಹೊದಿಸಿ ಪರಿಸ್ಪರ ಗೌರವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.