ADVERTISEMENT

ಕೋಚಿಂಗ್ ಸೆಂಟರ್ ದುರಂತ: ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಪಿಟಿಐ
Published 31 ಜುಲೈ 2024, 15:37 IST
Last Updated 31 ಜುಲೈ 2024, 15:37 IST
bb
bb   

ನವದೆಹಲಿ: ‘ದೆಹಲಿ ಪೊಲೀಸರು ಏನು ಮಾಡುತ್ತಿದ್ದಾರೆ? ಅವರಿಗೆ ತಮ್ಮ ಮೇಲೆ ನಿಯಂತ್ರಣ ಇಲ್ಲವಾಗಿದೆಯೇ’ ಎಂದು ದೆಹಲಿ ಹೈಕೋರ್ಟ್ ಬುಧವಾರ ಕಟುವಾಗಿ ಪ್ರಶ್ನಿಸಿದೆ.

ದೆಹಲಿಯ ಕೋಚಿಂಗ್ ಕೇಂದ್ರವೊಂದರ ತಳಮಹಡಿಗೆ ನೀರು ನುಗ್ಗಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಎಸ್‌ಯುವಿ ವಾಹನದ ಚಾಲಕರೊಬ್ಬರನ್ನು ಬಂಧಿಸಿರುವ ಪೊಲೀಸರಿಗೆ ಚಾಟಿ ಬೀಸುವ ಕೆಲಸವನ್ನು ಕೋರ್ಟ್‌ ಮಾಡಿದೆ.

ವಿಚಿತ್ರವಾದ ತನಿಖೆಯೊಂದು ಇಲ್ಲಿ ನಡೆಯುತ್ತಿದೆ. ಹಳೆ ರಾಜೀಂದರ್ ನಗರದಲ್ಲಿ ಕಾರು ಚಲಾಯಿಸಿದ ವ್ಯಕ್ತಿಯ ವಿರುದ್ಧ ದೆಹಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆದರೆ ಪೊಲೀಸರು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರು ಇದ್ದ ವಿಭಾಗೀಯ ಪೀಠವು ಹೇಳಿದೆ.

ADVERTISEMENT

‘ದೆಹಲಿ ಪೊಲೀಸರು ಏನು ಮಾಡುತ್ತಿದ್ದಾರೆ? ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಇದು ಮುಚ್ಚಿಹಾಕುವ ಪ್ರಯತ್ನವೇ?’ ಎಂದು ಪೀಠ ಪ್ರಶ್ನಿಸಿದೆ.

ಸ್ಥಳದಲ್ಲಿ ಕಾರು ಚಲಾಯಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದ ಪೀಠವು, ‘ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಇದುವರೆಗೆ ಹೊಣೆಗಾರರನ್ನಾಗಿಸಲಾಗಿದೆಯೇ? ಅಧಿಕಾರಿಗಳನ್ನು ಹೊಣೆ ಆಗಿಸಿದರೆ ಮುಂದೆ ಇಂತಹ ಘಟನೆಗಳು ಆಗುವುದಿಲ್ಲ’ ಎಂದು ಹೇಳಿತು.

‘ತನಿಖೆಯನ್ನು ಯಾರು ನಡೆಸುತ್ತಿದ್ದಾರೆ? ಅವರು ಆ ಪ್ರದೇಶದ ಯಾವುದೇ ದಾರಿಹೋಕನನ್ನು ಅಥವಾ ಚಾಲಕನನ್ನು ಹಿಡಿದು, ಇವೆಲ್ಲ ನೀನು ಕಾರು ಚಲಾಯಿಸಿದ್ದರಿಂದ ಆಯಿತು ಎನ್ನಲು ಯತ್ನಿಸುತ್ತಿದ್ದಾರೆ. ಯಾವುದಾದರೂ ಅಧಿಕಾರಿಯನ್ನು ತನಿಖೆಗೆ ಗುರಿಪಡಿಸಲಾಗಿದೆಯೇ? ಚರಂಡಿಯಲ್ಲಿನ ಹೂಳು ತೆಗೆಯದ ಅಧಿಕಾರಿಯನ್ನು ಪ್ರಶ್ನಿಸಿದ್ದಾರೆಯೇ’ ಎಂದು ಪ್ರಶ್ನಿಸಿತು.

ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಕುರಿತ ತನಿಖೆಯನ್ನು ಕೇಂದ್ರೀಯ ಸಂಸ್ಥೆಯೊಂದಕ್ಕೆ ವಹಿಸುವ ಇಂಗಿತವನ್ನು ಹೈಕೋರ್ಟ್ ವ್ಯಕ್ತಪಡಿಸಿದೆ. ಪಾಲಿಕೆಯ ಆಯುಕ್ತ, ಸಂಬಂಧಪಟ್ಟ ಡಿಸಿಪಿ ಮತ್ತು ಪ್ರಕರಣದ ತನಿಖಾಧಿಕಾರಿ ತನ್ನೆದುರು ಶುಕ್ರವಾರ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದೆ.

ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಬಗ್ಗೆ ಉನ್ನತ ಮಟ್ಟದ ಸಮಿತಿಯೊಂದರಿಂದ ತನಿಖೆ ನಡೆಸಬೇಕು ಎಂಬ ಕೋರಿಕೆ ಇರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ. ಅಲ್ಲದೆ, ದೆಹಲಿ ನಗರದಲ್ಲಿ ನೂರಾರು ಗ್ರಂಥಾಲಯಗಳು ತಳಮಹಡಿಗಳಲ್ಲಿ ಇವೆ ಎಂಬ ಅರ್ಜಿಗಳನ್ನೂ ಅದು ವಿಚಾರಣೆ ನಡೆಸುತ್ತಿದೆ. ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.

ಕೋರ್ಟ್‌ ಹೇಳಿದ ಮಾತುಗಳು

  • ನಿಮ್ಮ ಪ್ರಾಧಿಕಾರಗಳು ದಿವಾಳಿಯೆದ್ದಿವೆ. ನಿಮಗೆ ಸಂಬಳ ಕೊಡುವುದಕ್ಕೇ ಹಣ ಇಲ್ಲದಿದ್ದಾಗ ಮೂಲಸೌಕರ್ಯವನ್ನು ಹೇಗೆ ಮೇಲ್ದರ್ಜೆಗೆ ಏರಿಸುತ್ತೀರಿ? ನಿಮಗೆ ಉಚಿತ ಕೊಡುಗೆಗಳ ಸಂಸ್ಕೃತಿ ಬೇಕು, ತೆರಿಗೆ ಸಂಗ್ರಹಿಸುವುದು ನಿಮಗೆ ಬೇಕಿಲ್ಲ. ನೀವು ಹಣ ಸಂಗ್ರಹಿಸುತ್ತಿಲ್ಲ, ಹೀಗಾಗಿ ನೀವು ಹಣವನ್ನು ಖರ್ಚು ಮಾಡುತ್ತಿಲ್ಲ. ಈ ದುರಂತವು ಒಂದಲ್ಲ ಒಂದು ದಿನ ಆಗುವುದಿತ್ತು.

  • ಉಚಿತ ಕೊಡುಗೆಗಳ ಸಂಸ್ಕೃತಿ ಬೇಕೇ ಅಥವಾ ನಿಮಗೆ ಸೂಕ್ತವಾದ ಮೂಲಸೌಕರ್ಯ ಬೇಕೇ ಎಂಬುದನ್ನು ನೀವು ನೋಡಬೇಕು. ದೆಹಲಿಯ ಜನಸಂಖ್ಯೆ 3.3 ಕೋಟಿಯಷ್ಟಿದೆ. ಆದರೆ ಈ ನಗರ ಯೋಜಿತವಾಗಿದ್ದು 6–7 ಲಕ್ಷ ಜನರಿಗಾಗಿ. ಮೂಲಸೌಕರ್ಯವನ್ನು ಮೇಲ್ದರ್ಜೆಗೆ ಏರಿಸದೆ ನೀವು ಇಷ್ಟೊಂದು ಜನರಿಗೆ ಹೇಗೆ ಆಶ್ರಯ ಕಲ್ಪಿಸುತ್ತೀರಿ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.