ADVERTISEMENT

ದೆಹಲಿ ಕೋಚಿಂಗ್ ಸೆಂಟರ್ ದುರಂತ: ಬಾಗಿಲಿಗೆ ಬಯೊಮೆಟ್ರಿಕ್‌ ವ್ಯವಸ್ಥೆ ಇರಲಿಲ್ಲ

ಪಿಟಿಐ
Published 30 ಜುಲೈ 2024, 14:31 IST
Last Updated 30 ಜುಲೈ 2024, 14:31 IST
   

ನವದೆಹಲಿ: ‘ನೆಲಮಾಳಿಗೆಯಲ್ಲಿದ್ದ ಕೊಠಡಿಗೆ ಬಯೊಮೆಟ್ರಿಕ್‌ ವ್ಯವಸ್ಥೆ ಅಳವಡಿಸಲಾಗಿರಲಿಲ್ಲ’ ಎಂದು ‘ರಾವ್ಸ್‌ ಐಎಎಸ್‌ ಸ್ಟಡಿ ಸರ್ಕಲ್‌’ನಲ್ಲಿ ಕೋಚಿಂಗ್‌ ಪಡೆಯುತ್ತಿರುವ ಕೆಲವು ಆಕಾಂಕ್ಷಿಗಳು ಮಂಗಳವಾರ ಪಿಟಿಐಗೆ ತಿಳಿಸಿದ್ದಾರೆ. ‘ಮಳೆನೀರು ನುಗ್ಗಿದ್ದರಿಂದ ಬಯೊಮೆಟ್ರಿಕ್‌ ಯಂತ್ರವು ನಿಷ್ಕ್ರಿಯವಾಯಿತು. ಆದ್ದರಿಂದಲೇ ಮೂವರು ಆಕಾಂಕ್ಷಿಗಳು ಸಿಲುಕಿಕೊಳ್ಳುವಂತಾಯಿತು’ ಎಂದು ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಸೋಮವಾರ ಹೇಳಿದ್ದರು.

‘ನೆಲಮಾಳಿಗೆಯಲ್ಲಿನ ಕೊಠಡಿಯಲ್ಲಿ ಅಣಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಜೊತೆಗೆ ಕೆಲವು ಅಧ್ಯಯನಕ್ಕೆ ಬೇಕಾದ ವಸ್ತುಗಳನ್ನು ಇರಿಸಲಾಗುತ್ತದೆ. ಇಲ್ಲಿ ಎರಡು ಬಾಗಿಲುಗಳಿವೆ. ಸಾಮಾನ್ಯವಾಗಿ ಒಂದು ಬಾಗಿಲನ್ನು ಸಂಜೆ 6ರ ನಂತರ ಮುಚ್ಚಲಾಗುತ್ತದೆ. ಬಹುಶಃ ಮುಚ್ಚಿದ್ದ ಬಾಗಿಲಿನ ಭಾಗದಲ್ಲಿ ಮೂವರು ಸಿಲುಕಿಕೊಂಡಿದ್ದಿರಬಹುದು’ ಎಂದು ಅವರು ಹೇಳಿದರು.

ನೋಟಿಸ್‌: ರಾಷ್ಟ್ರೀಯ ಮಾನವ ಹಕ್ಕು ಆಯೋಗವು ದೆಹಲಿ ಸರ್ಕಾರಕ್ಕೆ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ. ಎರಡು ವಾರಗಳಲ್ಲಿ ಘಟನೆಗೆ ಸಂಬಂಧಿಸಿದಂತೆ ವಿಸ್ತೃತ ವರದಿ ನೀಡುವಂತೆಯೂ ಹೇಳಿದೆ. ನಿಯಮಗಳನ್ನು ಗಾಳಿಗೆ ತೂರಿ ಯಾವೆಲ್ಲಾ ಕೋಚಿಂಗ್ ಸಂಸ್ಥೆಗಳು ಸೆಂಟರ್‌ಗಳನ್ನು ನಡೆಸುತ್ತಿವೆ. ಈ ಸೆಂಟರ್‌ಗಳ ವಿರುದ್ಧ ಎಷ್ಟು ದೂರುಗಳು ದಾಖಲಾಗಿವೆ ಮತ್ತು ಇವುಗಳ ತನಿಖೆ ಯಾವ ಹಂತದಲ್ಲಿದೆ, ಯಾವೆಲ್ಲಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿಗಳನ್ನು ನೀಡಬೇಕು ಎಂದು ಆಯೋಗ ಕೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.