ADVERTISEMENT

ಸ್ಥಗಿತಗೊಂಡಿರುವ 20 ಕಲ್ಲಿದ್ದಲು ಗಣಿಗಳು ಆದಾಯ ಹಂಚಿಕೆ ಮಾದರಿಯಡಿ ಖಾಸಗಿಗೆ: ಜೋಶಿ

ಐಎಎನ್ಎಸ್
Published 6 ಮೇ 2022, 16:23 IST
Last Updated 6 ಮೇ 2022, 16:23 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಮುಂಬೈ:ದೇಶದಲ್ಲಿ ಸ್ಥಗಿತಗೊಂಡಿರುವ 20 ಗಣಿಗಳನ್ನು ಆದಾಯ ಹಂಚಿಕೆ ಮಾದರಿಯ ಅಡಿಯಲ್ಲಿ ಖಾಸಗಿಯವರಿಗೆ ನೀಡುವ ಚಿಂತನೆಯನ್ನು ‘ಕೋಲ್‌ ಇಂಡಿಯಾ ಲಿಮಿಟೆಡ್‌’ ಹೊಂದಿದೆ. ಕಲ್ಲಿದ್ದಲು ಆಮದು ಪ್ರಮಾಣವನ್ನು ಕಡಿಮೆ ಮಾಡುವುದು ಇದರ ಮೂಲ ಉದ್ದೇಶ ಎಂದು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಶುಕ್ರವಾರ ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಜೋಶಿ,'ಸ್ಥಗಿತಗೊಂಡಿರುವ ಗಣಿಗಳಲ್ಲಿ ಹೊರತೆಗೆಯಬಹುದಾದ 38 ಕೋಟಿ ಟನ್‌ಗಳಷ್ಟು ಕಲ್ಲಿದ್ದಲು ಇದೆ. 3–4 ಕೋಟಿ ಟನ್‌ ಕಲ್ಲಿದ್ದಲನ್ನು ಸುಲಭವಾಗಿ ತೆಗೆಯಬಹುದಾಗಿದೆ' ಎಂದು ಹೇಳಿದ್ದಾರೆ.

ಗಣಿ ಚಟುವಟಿಕೆಯನ್ನು ಮುಂದುವರಿಸುವುದರಿಂದ, ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ ಉಷ್ಣ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಕಲ್ಲಿದ್ದಲುಪೂರೈಕೆ ಹೆಚ್ಚಿಸಲು ನೆರವಾಗಲಿದೆ ಎಂದೂ ತಿಳಿಸಿದ್ದಾರೆ.

ADVERTISEMENT

ದೇಶವು ಇಂಧನ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆಯಿಟ್ಟಿದೆ ಎಂದಿರುವ ಜೋಶಿ, ದೂರ ಪ್ರದೇಶಗಳನ್ನೂ ವಿದ್ಯುದೀಕರಣಗೊಳಿಸಲು ಸರ್ಕಾರದ ಶ್ರಮಿಸುತ್ತಿದೆ. ಸಾರಿಗೆ ವ್ಯವಸ್ಥೆಯಲ್ಲಿ ಇಂಧನ ಆಯ್ಕೆಯಲ್ಲಿ ಬದಲಾವಣೆ, ಆಧುನಿಕ ಜೀವನಶೈಲಿಯು ವಿದ್ಯುತ್‌ನ ಬೇಡಿಕೆಯನ್ನು ಹೆಚ್ಚಿಸಿವೆ ಎಂದಿದ್ದಾರೆ.

ರೈಲ್ವೆ, ಗಣಿ ಮತ್ತು ಕಲ್ಲಿದ್ದಲು ಇಲಾಖೆಯ ರಾಜ್ಯ ಖಾತೆ ಸಚಿವ ರಾವ್‌ಸಾಹೇಬ್‌ ಪಾಟೀಲ್‌ ದಾನ್ವೆ ಅವರು, ಭಾರತವು ವಿಶ್ವದಲ್ಲೇ ಐದನೇ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪ ಹೊಂದಿರುವ ರಾಷ್ಟ್ರವಾಗಿದೆ. 2023–24ರ ಆರ್ಥಿಕ ವರ್ಷದಲ್ಲಿ ಕಲ್ಲಿದ್ದಲು ಉತ್ಪಾದನೆಯನ್ನು 1.2 ಶತಕೋಟಿ (1,200 ಕೋಟಿ) ಮೆಟ್ರಿಕ್‌ ಟನ್‌ಗಳಿಗೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.