ಕೋಲ್ಕತ್ತ: ಪಶ್ಚಿಮ ಬಂಗಾಳದ ಬೀರ್ಭೂಮ್ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಬೆಳಿಗ್ಗೆ 10.30ರ ಸುಮಾರಿಗೆ ಸ್ಪೋಟ ಸಂಭವಿಸಿದೆ. ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಕಲ್ಲಿದ್ದಲು ಗಣಿಯ ತ್ಯಾಜ್ಯ ವಿಲೇವರಿ ಘಟಕದ ಬಳಿ ಈ ಘಟನೆ ಸಂಭವಿಸಿದೆ. ಸ್ಫೋಟಕ್ಕೆ ಕಾರಣ ತಿಳಿದುಕೊಳ್ಳಲು ತನಿಖೆ ಪ್ರಾರಂಭಿಸಲಾಗಿದೆ. ಮೃತಪಟ್ಟ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡಲಾಗುವುದು’ ಎಂದು ಡಬ್ಲ್ಯೂಬಿಪಿಡಿಸಿಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಿಬಿ ಸಲೀಂ ಪಿಟಿಐಗೆ ತಿಳಿಸಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಬಿಜೆಪಿ ಶಾಸಕ ಅನುಪ್ ಸಹಾ, ‘ಸೂಕ್ತ ಮುನ್ನೆಚ್ಚರಿಕೆ ಇಲ್ಲದೆ ಟ್ರಕ್‌ನಿಂದ ಸ್ಫೋಟಕ ವಸ್ತುಗಳನ್ನು ಇಳಿಸಿರುವುದೇ ದುರಂತಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಗೊಂಡವರ ಸ್ಥಿತಿಯೂ ಚಿಂತಾಜನಕವಾಗಿದೆ’ ಎಂದು ಹೇಳಿದರು.
ಡಬ್ಲ್ಯೂಬಿಪಿಡಿಸಿಎಲ್, ಪಶ್ಚಿಮ ಬಂಗಾಳ ಸರ್ಕಾರದ ಒಡೆತನದ ಕಂಪೆನಿಯಾಗಿದ್ದು, ರಾಜ್ಯದಲ್ಲಿ ಒಟ್ಟು ಐದು ಸ್ಥಾವರಗಳನ್ನು ಹೊಂದಿದೆ. 4,265 ಎಂಡಬ್ಲ್ಯೂ ಥರ್ಮಲ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆಚ್ಚುವರಿ 660 ಎಂಡಬ್ಲ್ಯೂ ವಿದ್ಯುತ್ ಉತ್ಪಾದಿಸುವ ಗುರಿಯಿಟ್ಟುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.