ನವದೆಹಲಿ: ಭಾರತೀಯ ನೌಕಾಪಡೆಯು ಅಂಡಮಾನ್ ನಿಕೋಬಾರ್ ದ್ವೀಪಗಳ ಬಳಿ ಬಂಗಾಳ ಕೊಲ್ಲಿಯಲ್ಲಿ ಮೀನುಗಾರಿಕಾ ದೋಣಿಯಲ್ಲಿ ಸಾಗಿಸುತ್ತಿದ್ದ ಐದು ಟನ್ ತೂಕದ ಡ್ರಗ್ಸ್ ವಶಪಡಿಸಿಕೊಂಡಿದೆ. ಇದು ನೌಕಾಪಡೆ ನಡೆಸಿದ ಅತಿದೊಡ್ಡ ಕಾರ್ಯಾಚರಣೆಗಳಲ್ಲಿ ಒಂದಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಗುಜರಾತ್ ಕರಾವಳಿ ತೀರದಲ್ಲಿ ಮಾದಕ ದ್ರವ್ಯ ನಿಗ್ರಹ ದಳದ ನೇತೃತ್ವದಲ್ಲಿ ನೌಕಾಪಡೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 700 ಕೆ.ಜಿ. ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದು, 8 ಮಂದಿ ಇರಾನ್ ಮೂಲದ ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಲಾಗಿತ್ತು.
‘ಗುಪ್ತಚರ ದಳ ನೀಡಿದ ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ನೌಕಾಪಡೆ ಅಧಿಕಾರಿಗಳು ಮಾದಕ ವಸ್ತುವಿದ್ದ ಹಡಗನ್ನು ಗುರುತಿಸಿ ಶೋಧ ನಡೆಸಲು ನೆರವಾದರು. ಹೀಗಾಗಿ ಭಾರತಕ್ಕೆ ತರಲಾಗುತ್ತಿದ್ದ 700 ಕೆ.ಜಿ. ಮೆಥಾಮ್‌ಫೆಟಮಿನ್ ರಾಸಾಯನಿಕವನ್ನು ತಡೆಹಿಡಿಯಲಾಯಿತು. ಮಾದಕವಸ್ತು ನಿಯಂತ್ರಣ ಘಟಕ (ಎನ್‌ಸಿಬಿ), ನೌಕಾಪಡೆ ಮತ್ತು ಗುಜರಾತ್‌ನ ಭಯೊತ್ಪಾದನಾ ನಿಗ್ರಹ ದಳದ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು. ಈ ಕಾರ್ಯಾಚರಣೆಗೆ ‘ಸಾಗರ್ ಮಂಥನ್–4’ ಎಂದು ಹೆಸರಿಡಲಾಗಿದೆ’ ಎಂದು ಮಾದಕ ವಸ್ತು ನಿಯಂತ್ರಣ ಬ್ಯೂರೊ (ಎನ್‌ಸಿಬಿ) ಹೇಳಿಕೆಯಲ್ಲಿ ತಿಳಿಸಿತ್ತು.
ಅಧಿಕಾರಿಗಳ ಯಶಸ್ವಿ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಅಮಿತ್ ಶಾ, ‘ನಮ್ಮ ಅಧಿಕಾರಿಗಳು ವಿದೇಶಿ ಮಾದಕ ದ್ರವ್ಯ ಸಾಗಣೆಯನ್ನು ಪತ್ತೆ ಮಾಡಿ, ಅದನ್ನು ತಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಡ್ರಗ್ಸ್ ಮುಕ್ತ ಭಾರತದ ಯೋಜನೆಗೆ ಇದು ಪೂರಕವಾಗಿದೆ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.