ADVERTISEMENT

ಕೊಯಮತ್ತೂರು ಕಾರು ಸ್ಫೋಟ: ತಮಿಳುನಾಡಿನ 45 ಸ್ಥಳಗಳಲ್ಲಿ ಎನ್‌ಐಎ ದಾಳಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 4:33 IST
Last Updated 10 ನವೆಂಬರ್ 2022, 4:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಗುರುವಾರ ಚೆನ್ನೈ, ಮಧುರೈ ಸೇರಿದಂತೆ ರಾಜ್ಯಾದ್ಯಂತ 45 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

ಮೂಲಗಳ ಪ್ರಕಾರ, ಕೊಯಮತ್ತೂರಿನಲ್ಲಿ 20, ಚೆನ್ನೈಯಲ್ಲಿ 12ಕ್ಕೂ ಹೆಚ್ಚು ಮತ್ತು ಮುಧುರೈ, ರಾಮನಾಥಪುರಂ ಸೇರಿದಂತೆರಾಜ್ಯದ ಹಲವೆಡೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಬಂಧಿಸಿರುವ ಆರು ಆರೋಪಿಗಳಿಗೆ ಸಂಬಂಧಪಟ್ಟ ಸ್ಥಳ ಹಾಗೂ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ನಿಷೇಧಿತ ಸಂಘಟನೆಯ ಸದಸ್ಯರನ್ನು ತನಿಖೆಗೊಳಪಡಿಸಲಾಗುತ್ತಿದೆ.

ಅಕ್ಟೋಬರ್ 23ರಂದು ಕೊಯಮತ್ತೂರಿನ ಉಕ್ಕಡಂ ದೇವಾಲಯದ ಬಳಿ ಕಾರಿನಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಅದರಲ್ಲಿದ್ದ ಜಮೀಶ್ ಮುಬೀನ್ ಎಂಬಾತ ಮೃತಪಟ್ಟಿದ್ದ. ಘಟನೆಯಲ್ಲಿ ಮುಬೀನ್ ನಂಟು ಹಾಗೂ ಭಯೋತ್ಪಾದನಾಕೃತ್ಯದ ಸಂಚು ಕುರಿತಾಗಿ ತನಿಖೆ ನಡೆಸಲಾಗುತ್ತಿದೆ.

ತಮಿಳುನಾಡು ಸರ್ಕಾರದ ಶಿಫಾರಸಿನಂತೆ ಅಕ್ಟೋಬರ್ 27ರಂದು ಪ್ರಕರಣವನ್ನು ಕೇಂದ್ರ ಸರ್ಕಾರವು ಎನ್‌ಐಎಗೆ ವರ್ಗಾಯಿಸಿತ್ತು. ಎನ್‌ಐಎ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಎರಡು ವಾರದೊಳಗೆ ನಡೆಸಿರುವ ಮೊದಲ ಶೋಧ ಕಾರ್ಯಾಚರಣೆ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.