ADVERTISEMENT

ಅಂದು ಮಡಿದವರು, ಇಂದು ಕಾಡುವರು ಮನದಲಿ

ಕೋಡಿಬೆಟ್ಟು ರಾಜಲಕ್ಷ್ಮಿ
Published 26 ಜುಲೈ 2019, 15:36 IST
Last Updated 26 ಜುಲೈ 2019, 15:36 IST
ಕರ್ನಲ್‌ ಎನ್‌. ಬಾಲಕೃಷ್ಣ
ಕರ್ನಲ್‌ ಎನ್‌. ಬಾಲಕೃಷ್ಣ   

ಮಂಗಳೂರಿನ ಕರ್ನಲ್‌ ಎನ್‌. ಬಾಲಕೃಷ್ಣ ಅವರು ಕಾರ್ಗಿಲ್‌ ಸಂಘರ್ಷದ ಸಂದರ್ಭದಲ್ಲಿ ಸೇನೆಯ ಸಂಪರ್ಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದವರು. ಸಾಮಾನ್ಯವಾಗಿ ಲೇಹ್‌, ಲಡಾಕ್‌ನಂತಹ ಚಳಿಪ್ರದೇಶದಲ್ಲಿ ಒಬ್ಬ ಸೇನಾ ಸಿಬ್ಬಂದಿಗೆ ಎರಡೂವರೆ ವರ್ಷಗಳ ಅವಧಿ ನಿಯೋಜನೆ ನಡೆದರೂ ಕಾರ್ಗಿಲ್‌ ಸಂಘರ್ಷ ಎದುರಾದ್ದರಿಂದ 1999ರಲ್ಲಿ ಅವರ ಅವಧಿ ಮುಕ್ತಾಯವಾದರೂ ವರ್ಗಾವಣೆ ಆಗಲಿಲ್ಲ. ಲೇಹ್‌ನಲ್ಲಿದ್ದ ಹೆಡ್‌ಕ್ವಾರ್ಟ್ರಸ್‌ ಬೇಸ್‌ ಕ್ಯಾಂಪ್‌ನಲ್ಲಿ ಅವರು ಸಿಗ್ನಲ್ಸ್‌ ವಿಭಾಗದ ಕೆಲಸ ನಿರ್ವಹಿಸಿದವರು.

‘ಮೊಬೈಲ್‌, ಇಂಟರ್‌ನೆಟ್‌ ಇಲ್ಲದ ಆ ಕಾಲದಲ್ಲಿ ವೈರ್‌ಲೆಸ್‌ ರೇಡಿಯೋ ಸಂಪರ್ಕವೇ ಮುಖ್ಯವಾದ ಮಾಧ್ಯಮ. ಆ ಮೂಲಕವೇ ಮಾಹಿತಿಯನ್ನು ರವಾನೆ ಮಾಡಲಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಮೈಯೆಲ್ಲವನ್ನೂ ಕಿವಿ ಮಾಡಿಕೊಂಡೇ ಕೆಲಸ ಮಾಡುವುದು ಒಂದು ಅದ್ಭುತ ಅನುಭವವೇ ಸರಿ. ಸೇನೆಯ ಮಾಹಿತಿ ಎಂದರೆ ಅದು ಎಷ್ಟೊಂದು ಗುಪ್ತವಾಗಿರಬೇಕು ಎಂಬ ಜವಾಬ್ದಾರಿಯೇ ನಮ್ಮನ್ನು ಎಚ್ಚರದಲ್ಲಿ ಇರಿಸುತ್ತಿತ್ತು’ ಎಂದು ’ಪ್ರಜಾವಾಣಿ’ ಜೊತೆ ಮಾತನಾಡುತ್ತ ಬಾಲಕೃಷ್ಣ ವಿವರಿಸಿದರು.

ಸಂಪರ್ಕವಿಭಾಗದಲ್ಲಿ ಇದ್ದುದರಿಂದ ನೇರವಾಗಿ ಸಂಘರ್ಷದಲ್ಲಿ ಭಾಗವಹಿಸುವ ಅವಕಾಶ ಸಿಗದೇ ಇದ್ದರೂ, ಹೋರಾಟದ ಕಣದಲ್ಲಿ ನಡೆಯುತ್ತಿದ್ದ ಘಟನೆಯ ಬಗೆಗಿನ ಪ್ರತೀ ಮಾಹಿತಿಯನ್ನೂ ಪಡೆಯುತ್ತ ಇದ್ದವರು ಬಾಲಕೃಷ್ಣ. ಅವರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದ ಘಟನೆ ಮೇಜರ್‌ ಸೋನಮ್‌ ವಾಂಗ್‌ ಚುಕ್‌ ಅವರ ಹೋರಾಟ.

ADVERTISEMENT

ಇದನ್ನೂ ಓದಿ:ಸೈನಿಕರ ‘ಗೃಹ’ಬಲ

ಕಾರ್ಗಿಲ್‌ನಲ್ಲಿದ್ದ ಭಾರತೀಯ ಸೈನಿಕರು ಚಳಿಗಾಲದಲ್ಲಿ ಕೆಳಕ್ಕಿಳಿದು ಬರುವುದು ಅನಿವಾರ್ಯ. ಮತ್ತೆ ಬೇಸಿಗೆಯಲ್ಲಿ ಅಂದರೆ ಸುಮಾರು ಮೇ ಉತ್ತರಾರ್ಧದಲ್ಲಿ ಅಲ್ಲಿಗೆ ತೆರಳುವ ಸಿದ್ಧತೆಯಲ್ಲಿದ್ದಾಗ ಪಾಕಿಸ್ತಾನದ ಸೈನಿಕರು ಭಾರತೀಯರ ಗಡಿಠಾಣೆಗಳಲ್ಲಿ ಇರುವುದನ್ನು ಕುರಿಗಾಹಿಗಳು ಕಂಡಿದ್ದರು. ಅವರು ನೀಡಿದ ಮಾಹಿತಿ ಆಧರಿಸಿ, ಪರಿಸ್ಥಿತಿಯನ್ನು ಪರಿಶೀಲಿಸಲು ಮೇಜರ್‌ ಸೋನಮ್‌ ವಾಂಗ್‌ ಚುಕ್‌ ಅವರನ್ನು ಸೈನಿಕರ ತಂಡದೊಂದಿಗೆ ಅಲ್ಲಿಗೆ ಕಳುಹಿಸಲಾಯಿತು.

ಸೇನೆಯ ಒಂದು ಕಂಪೆನಿಯನ್ನು ಕರೆದುಕೊಂಡು ಅವರು ಮೇಲಕ್ಕೆ ಹೋಗುತ್ತಿದ್ದಂತೆಯೇ ಪಾಕ್‌ ಸೈನಿಕರಿಗೆ ಈ ಮಾಹಿತಿ ಗೊತ್ತಾಯಿತು. ಮೇಜರ್ ಅವರ ಪಡೆಯನ್ನು ತಡೆಯಲು ಪಾಕ್‌ ಸೈನಿಕರು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದರು. ಹಾಗೆ ನಡೆದ ಸ್ಫೋಟದಲ್ಲಿ ಹವಾಲ್ದಾರ್‌ ಒಬ್ಬರು ತೀರಿಕೊಂಡರು.

ಹಾಗಂತ ತನ್ನ ಹೆಗಲ ಮೇರಿಸಿದ್ದ ಕರ್ತವ್ಯವನ್ನು ಮರೆತು ವಾಪಸ್‌ ಬರುವುದು ನಿಷ್ಠಾವಂತ ಸೈನಿಕನಿಂದ ಸಾಧ್ಯವಿಲ್ಲದ ಕೆಲಸ. ವಾಂಗ್‌ ಚುಕ್‌ ಅವರು ’ಲಡಾಕ್‌ ಸ್ಕೌಟ್ಸ್‌’ಗೆ ಸೇರಿದವರು ಎಂಬುದು ಗಮನಾರ್ಹ. ಅಂದರೆ ಆ ಪರ್ವತ ಪ್ರದೇಶದ ಸಂಪೂರ್ಣ ಅರಿವು ಇರುವವರು. ಲೇಹ್‌ನ ಕಾಕ್‌ಶಾಲಾ ಅವರ ಹುಟ್ಟೂರಾಗಿತ್ತು. ಆ ಬೆಟ್ಟಗಳ ಇಂಚಿಂಚಿನ್ನೂ ನೋಡುತ್ತ ಬೆಳೆದವರು. ಅವರಿಗೆ ಸ್ಫೂರ್ತಿ ನೀಡಲು ಬಾಲ್ಯದ ಈ ನೆನಪುಗಳೇ ಸಾಕು ಎಂಬಂತೆ ಅವರು ಕಾರ್ಗಿಲ್‌ ಮೇಲಿರುವ ಭಾರತೀಯ ಗಡಿಠಾಣೆಗಳತ್ತ ಮುನ್ನುಗ್ಗಿದ್ದರು. ಅಷ್ಟೇ ಅಲ್ಲ, ಅಲ್ಲಿದ್ದ ಆರು ಮಂದಿ ಪಾಕ್‌ ಸೈನಿಕರನ್ನು ಕೊಂದು ಭಾರತೀಯ ಧ್ವಜವನ್ನು ಅಲ್ಲಿ ನೆಟ್ಟಿದ್ದರು. ಮೇ 30ರಂದು ನಡೆದ ಈ ಘಟನೆ ಕಾರ್ಗಿಲ್‌ ಸಂಘರ್ಷದ ಮೊದಲ ಜಯವಾಗಿತ್ತು ಎನ್ನುತ್ತ ಬಾಲಕೃಷ್ಣ ಒಂದು ಕ್ಷಣ ಮೌನವಾದರು.

‘ಮೊದಲ ಮಾಹಿತಿ ನೀವು ಪಡೆದಿದ್ದೀರಾ ?‘ ಎಂಬ ಪ್ರಶ್ನೆಗೆ, ’ನಿವೃತ್ತನಾದರೂ ಅಂತಹ ಮಾಹಿತಿಯ ಬಗ್ಗೆಲ್ಲ ಮಾತನಾಡುವುದು ಸರಿಯಲ್ಲ’ ಎಂದುತ್ತರಿಸಿದರು.

ಆದರೆ ಕಾರ್ಗಿಲ್‌ ಎಂಬುದು ಹೀಗೆ ಯಶಸ್ಸಿನ ಹಾದಿಯಷ್ಟೇ ಅಲ್ಲ. ಯುದ್ಧ ಭೂಮಿಯಲ್ಲಿ ಎದುರಾಗುವ ಸೈನಿಕರಿಗಿಂತಲೂ ಅಲ್ಲಿನ ಹವಾಮಾನವೇ ಸೈನಿಕರ ಪರಮ ಶತ್ರುವಾಗಿತ್ತು. ಮೈನಸ್‌ 22, 23 ಡಿಗ್ರಿ ಸೇಲ್ಸಿಯಸ್‌ ತಾಪಮಾನದಲ್ಲಿ ಯುದ್ಧಕ್ಕಾಗಿ ಬರುವ ಸೈನಿಕರಿಗೆ ಮೊದಲು ಹವಾಮಾನ ಒಗ್ಗುವ ತರಬೇತಿ (acclimatization) ಅಗತ್ಯವಾಗಿತ್ತು. ಥಂಡಿ ಹವೆಗೆ ಶ್ವಾಸಕೋಸದ ಕಾಯಿಲೆ ಬೇಗನೇ ಅಂಟಿಕೊಂಡು ಜೀವವನ್ನೇ ಬಲಿಪಡೆಯುತ್ತಿತ್ತು.

ಆದರೆ ಯುದ್ಧದ ಗಡಿಬಿಡಿಯಲ್ಲಿ ಈ ತರಬೇತಿ ಕಷ್ಟವಾಗುತ್ತಿತ್ತು. ಕೆಲವರಿಗೆ ತರಬೇತಿಯಲ್ಲಿಯೇ ಆರೋಗ್ಯ ಕೆಡುತ್ತಿತ್ತು. ಅವರನ್ನು ಆ ಮಂಜಿನ ಬೆಟ್ಟದಿಂದ ಕೆಳಕ್ಕೆ ಕರೆದೊಯ್ಯುವುದು ಸವಾಲೇ. ತಡವಾದಾಗ ಆರೋಗ್ಯ ಮತ್ತಷ್ಟು ಬಿಗಡಾಯಿಸಿ ಜೀವಕ್ಕೆ ಸಂಚಕಾರ ಬರುತ್ತಿತ್ತು. ಹೆಲಿಕಾಪ್ಟರ್‌ ವ್ಯವಸ್ಥೆ ಮಾಡುವುದೂ ಸುಲಭವಾಗಿರಲಿಲ್ಲ. ಸೆಕೆಂಡ್‌ ಕಮಾಂಡರ್‌ ಆದಿತ್ಯ ಮಿಶ್ರಾ ಎಂಬವರಿಗೆ ಆರೋಗ್ಯ ಹದಗೆಟ್ಟಾಗ ನಾವು (ಅಂದರೆ ಸಪೋರ್ಟಿಂಗ್‌ ಟ್ರೂಪ್‌) ಅಲ್ಲಿ ಕೈಲಾದ ಚಿಕಿತ್ಸೆಯನ್ನೆಲ್ಲ ಕೊಡಿಸಿದ್ದೆವು. ಅವರನ್ನು ತುರ್ತಾಗಿ ಕೆಳಕ್ಕೆ ಕರೆದೊಯ್ಯಬೇಕಿತ್ತು. ಕಡಿದಾದ ಬೆಟ್ಟವನ್ನು ಇಳಿದು ಬರಲು ಸಿದ್ಧತೆಗಳು ನಡೆಯುವಷ್ಟರಲ್ಲಿಯೇ ಅವರು ತೀರಿಕೊಂಡರು.

ಅಂತಹ ಕೆಟ್ಟ ಹವೆಯಲ್ಲಿ ಹೋರಾಟ ಕಿಚ್ಚು ನಂದದಂತೆ ನೋಡಿಕೊಳ್ಳುವುದೇ ಸಪೋರ್ಟಿಂಗ್‌ ಟ್ರೂಪ್‌ನ ಕೆಲಸವಾಗಿತ್ತು. ಚಾರ್ಜ್‌ ಮಾಡಿದ ಬ್ಯಾಟರಿಗಳು ಬೇಗ ಬೇಗನೇ ಶಕ್ತಿಕುಂದುತ್ತಿದ್ದವು ಎನ್ನುತ್ತ ಬಾಲಕೃಷ್ಣ ನೆನಪುಗಳನ್ನು ಹೇಳಿಕೊಂಡರು.

’ಜುಲೈ 15ಕ್ಕೆ ಕಾರ್ಗಿಲ್‌ ಸಂಘರ್ಷ ಮುಗಿದಿತ್ತು. ಅಷ್ಟರಲ್ಲಿ ಅಲ್ಲಿಂದ ನನಗೆ ವರ್ಗಾವಣೆ ಆಯಿತು. ಆದರೆ ಮುಕ್ತಾಯದ ಬಳಿಕವೂ ಪಾಕ್‌ನ ಸೈನಿಕರು ಮತ್ತೆ ದಾಳಿ ನಡೆಸಿದ್ದರಿಂದ ಮತ್ತೊಂದು ವಾರ ಹೋರಾಟ ಮುಂದುವರೆಯಿತು’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.