ಶಿಮ್ಲಾ: ಹಿಮಾಚಲಪ್ರದೇಶದ ಎತ್ತರದ ಪರ್ವತ ಶ್ರೇಣಿ ಮತ್ತು ಆದಿವಾಸಿ ಸಮುದಾಯಗಳು ವಾಸವಿರುವ ಪ್ರದೇಶಗಳಲ್ಲಿ ಶೀತಗಾಳಿಯ ವಾತಾವರಣ ಮುಂದುವರಿದಿದ್ದು, ಲಾಹೋಲ್ ಮತ್ತು ಸ್ಫೀತಿ ಜಿಲ್ಲೆಯ ಕುಕುಮ್‌ಸೇರಿ ಪ್ರದೇಶದಲ್ಲಿ ಅತ್ಯಂತ ಕನಿಷ್ಠ ತಾಪಮಾನ 14.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಕಳೆದ ಕೆಲ ದಿನಗಳಿಂದ ನಿರಂತರ ಹಿಮಪಾತವಾಗುತ್ತಿರುವ ಹಿನ್ನೆಲೆಯಲ್ಲಿ 4 ರಾಷ್ಟ್ರೀಯ ಹೆದ್ದಾರಿಗಳು ಸೇರಿ 356 ರಸ್ತೆಗಳು ಈಗಲೂ ಬಂದ್ ಆಗಿವೆ. 162 ಟ್ರಾನ್ಸ್‌ಫಾರ್ಮರ್‌ಗಳು ಸ್ಥಗಿತಗೊಂಡಿವೆ ಎಂದು ತುರ್ತು ಕಾರ್ಯಾಚರಣಾ ಕೇಂದ್ರದ ಪ್ರಕಟಣೆ ತಿಳಿಸಿದೆ.
ಲಾಹೋಲ್ ಮತ್ತು ಸ್ಫೀತಿ ಜಿಲ್ಲೆಯಲ್ಲಿ ಕನಿಷ್ಠ 269 ರಸ್ತೆಗಳು ಬಂದ್ ಆಗಿದ್ದು, ಛಂಬಾದಲ್ಲಿ 58, ಕುಲು ಜಿಲ್ಲೆಯಲ್ಲಿ 21 ರಸ್ತೆಗಳ ಸಂಚಾರ ಸ್ಥಗಿತಗೊಂಡಿವೆ.
ಛಂಬಾ ಡಿಸಿ ಮುಕೇಶ್ ರೆಪಸ್ವಾಲ್ ಅವರನ್ನು ಭೇಟಿಯಾದ ಪಂಗಿ ಕಲ್ಯಾಣ ಸಂಘದ ಸ್ಥಳೀಯರ ನಿಯೋಗ, ವಿಮಾನಗಳ ಮೂಲಕ ಕಾರ್ಯಾಚರಣೆಗೆ ಒತ್ತಾಯಿಸಿದೆ.
ಪಂಗಿ ಪ್ರದೇಶದಲ್ಲಿ ರಸ್ತೆಗಳು ಬಂದ್ ಆಗಿದ್ದು, ಅನಾರೋಗ್ಯಪೀಡಿತ ಜನ, ವೃದ್ಧರು ಮತ್ತು ಗರ್ಭಿಣಿಯರು ಛಂಬಾ ಮತ್ತು ಕುಲು ಆಸ್ಪತ್ರೆಗಳಿಗೆ ತೆರಳಲು ಸಾಧ್ಯವಾಗದೆ ತತ್ತರಿಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಭಗತ್ ಬರೋತ್ರಾ ಹೇಳಿದ್ದಾರೆ.
ಫೆಬ್ರುವರಿ 24ರಿಂದ 29ರವರೆಗೆ ಪರ್ವತ ಶ್ರೇಣಿಗಳಲ್ಲಿ ಮಳೆ ಮತ್ತು ಹಿಮಪಾತ ಆಗುವ ಸಂಭವವಿದೆ ಎಂದು ಸ್ಥಳೀಯ ಹವಾಮಾನ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.