ADVERTISEMENT

ಉತ್ತರದ ರಾಜ್ಯಗಳಲ್ಲಿ ದಟ್ಟ ಮಂಜು: 4ನೇ ದಿನವೂ ವಿಮಾನ ಹಾರಾಟದಲ್ಲಿ ವ್ಯತ್ಯಯ

* ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 16:17 IST
Last Updated 17 ಜನವರಿ 2024, 16:17 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಮುಂಬೈ: ದೇಶದ ಉತ್ತರ ಭಾಗದ ಹಲವೆಡೆ ಬುಧವಾರ ಕೂಡ ಶೀತ ಮಾರುತದ ಪರಿಣಾಮ ದಟ್ಟ ಮಂಜು ಕವಿದ ಪರಿಣಾಮ ನಾಲ್ಕನೇ ದಿನವೂ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು. 

ದೆಹಲಿ ವಿಮಾನ ನಿಲ್ಧಾಣದಿಂದ ಹೊರಡಬೇಕಿದ್ದ 109 ವಿಮಾನಗಳು ತಡವಾಗಿ ಹಾರಾಟ ಆರಂಭಿಸಿದ್ದರೆ, 19 ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿತ್ತು ಎಂದು ‘ಫ್ಲೈಟ್‌ರಾಡಾರ್‌24’ ಜಾಲತಾಣದಲ್ಲಿ ವಿವರಿಸಲಾಗಿದೆ.

ADVERTISEMENT

ಮುಂದಿನ ಐದು ದಿನಗಳ ಕಾಲ ಮಂಜು ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಕಾರಣ, ವಿಮಾನಗಳ ಸಂಚಾರದಲ್ಲಿ ಮತ್ತಷ್ಟು ವ್ಯತ್ಯಯವಾಗುವ ಸಾಧ್ಯತೆ ಹೆಚ್ಚಿದೆ.

ರಾಷ್ಡ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ 2 ರಿಂದ 5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಉತ್ತರ ಪ್ರದೇಶ ಬಹುತೇಕ ಭಾಗಗಳಲ್ಲಿಯೂ ಇಷ್ಟೇ ಪ್ರಮಾಣದ ಉಷ್ಣಾಂಶ ಇತ್ತು ಎಂದು ಇಲಾಖೆ ತಿಳಿಸಿದೆ.

ಜ್ಯೋತಿರಾದಿತ್ಯ ಸಿಂಧಿಯಾ

ಸಿಂಧಿಯಾ–ತರೂರ್‌ ಜಟಾಪಟಿ ನವದೆಹಲಿ(ಪಿಟಿಐ): ವಿಮಾನಗಳ ಹಾರಾಟದಲ್ಲಿ ಆಗಿರುವ ವ್ಯತ್ಯಯ ಹಾಗೂ ದೆಹಲಿ ವಿಮಾನ ನಿಲ್ದಾಣದಲ್ಲಿನ ಅವ್ಯವಸ್ಥೆಯು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ‘ಈ ವಿದ್ಯಮಾನವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸೃಷ್ಟಿಸಿರುವ ವಿಪತ್ತು’ ಎಂದು ತರೂರ್‌ ಟೀಕಿಸಿದ್ದಾರೆ. ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ತರೂರ್‌‘ನಾಗರಿಕ ವಿಮಾನಯಾನ ಸಚಿವಾಲಯದ ಅಸಮರ್ಥತೆ ಮತ್ತು ನಿರ್ಲಕ್ಷ್ಯವೇ ದೆಹಲಿ ವಿಮಾನನಿಲ್ದಾಣದಲ್ಲಿನ ಗೊಂದಲಕ್ಕೆ ಕಾರಣ. ಜಗತ್ತಿನ ಹಲವು ಅಂತರರಾಷ್ಟ್ರೀಯ ವಿಮಾನನಿಲ್ದಾಣಗಳಲ್ಲಿ ಇರುವಂತಹ ಆಧುನಿಕ ಸೌಲಭ್ಯಗಳನ್ನು ಇಲ್ಲಿನ ವಿಮಾನನಿಲ್ದಾಣಗಳಲ್ಲಿ ಒದಗಿಸುವಲ್ಲಿಯೂ ವಿಫಲವಾಗಿದೆ’ ಎಂದು ಟೀಕಿಸಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವ ಸಿಂಧಿಯಾ ‘ಈ ವಿಷಯ ಕುರಿತು ಸಮರ್ಪಕ ತಿಳಿವಳಿಕೆ ಇಲ್ಲದವರು ಮಾಡಿರುವ ಟೀಕೆ ಇದು’ ಎಂದಿದ್ದಾರೆ. ‘ತರೂರ್‌ ಅವರು ಸಾಮಾನ್ಯ ಜನರಿಗೆ ಅರ್ಥವಾಗದ ಪದಗಳನ್ನು ನಿಘಂಟಿನಲ್ಲಿ ಹುಡುಕುವುದರಲ್ಲಿ ಮಗ್ನರಾಗಿದ್ದಾರೆ. ಅಲ್ಲದೇ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಲೇಖನಗಳ ಪೈಕಿ ಕೆಲವೊಂದನ್ನು ಆಯ್ಕೆ ಮಾಡಿಕೊಳ್ಳುವ ಅವರು ಅದನ್ನೇ ಸಂಶೋಧನೆ ಎಂದು ಭಾವಿಸಿದ್ದಾರೆ’ ಎಂದೂ ಸಿಂಧಿಯಾ ಟೀಕಿಸಿದ್ದಾರೆ. ನಟಿ ಛಡ್ಡಾ ಟೀಕೆ: ಇಂಡಿಗೊ ವಿಮಾನಗಳಲ್ಲಿ ಪ್ರಯಾಣಿಸುವ ವೇಳೆ ತಾವು ಎದುರಿಸಿದ ಕಷ್ಟಗಳನ್ನು ಹೇಳಿಕೊಂಡಿರುವ ನಟಿ ರಿಚಾ ಛಡ್ಡಾ ‘ವಿಮಾನಗಳ ಹಾರಾಟದಲ್ಲಿ ಪದೇಪದೇ ವಿಳಂಬವಾಗಿದ್ದರಿಂದ ಜನರು ತೊಂದರೆ ಅನುಭವಿಸುವುದು ನಿಲ್ಲುತ್ತಿಲ್ಲ. ಈ ಕ್ಷೇತ್ರದಲ್ಲಿನ ಏಕಸ್ವಾಮ್ಯತೆಯು ಉತ್ತರದಾಯಿತ್ವ ಇಲ್ಲದಂತೆ ಮಾಡುತ್ತಿದೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ. ನಟಿಯರಾದ ರಾಧಿಕಾ ಆಪ್ಟೆ ಸುರಭಿ ಚಂದನ ಹಾಗೂ ನಟ ರಣವೀರ್‌ ಶೋರೆ ಅವರು ಸಹ ತಮ್ಮ ಅಸಮಾಧಾನ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.