ನವದೆಹಲಿ: ‘ಸಮಷ್ಟಿಯಾಗಿ ಸೃಜನಶೀಲತೆಯಿಂದ ರೂಪಿಸಿದ್ದ ಪಠ್ಯಪುಸ್ತಗಳ ಸ್ವರೂಪವೇ ಬದಲಾಗಿದೆ. ಹೀಗಾಗಿ, ನಮ್ಮ ಹೆಸರುಗಳನ್ನು ಪಠ್ಯಪುಸ್ತಕಗಳಿಂದ ಕೈಬಿಡಬೇಕು’ ಎಂದು 33 ಮಂದಿ ಶಿಕ್ಷಣ ತಜ್ಞರು ಗುರುವಾರ ಎನ್‌ಸಿಇಆರ್‌ಟಿಗೆ ಪತ್ರ ಬರೆದಿದ್ದಾರೆ.
ರಾಜಕೀಯ ಚಿಂತಕರಾದ ಯೋಗೇಂದ್ರ ಯಾದವ್ ಮತ್ತು ಸುಹಾಸ್ ಫಾಲ್‌ಸಿಕರ್ ಅವರು ಇಂತಹುದೇ ಬೇಡಿಕೆಯನ್ನು ಈಗಾಗಲೇ ಇಟ್ಟಿದ್ದಾರೆ. ಈ ಎಲ್ಲರೂ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) ಪಠ್ಯಪುಸ್ತಕ ರಚನಾ ಸಮಿತಿ ಭಾಗವಾಗಿದ್ದರು.
ಹೆಸರು ಕೈಬಿಡಲು ಕೋರಿ ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಸಕ್ಲಾನಿ ಅವರಿಗೆ ಪತ್ರ ಬರೆದಿರುವ ಪ್ರಮುಖರು: ಜೆಎನ್‌ಯು ಮಾಜಿ ಪ್ರೊಫೆಸರ್ ಕಾಂತಿ ಪ್ರಸಾದ್ ಬಾಜಪೇಯಿ, ಅಶೋಕ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರತಾಪ್ ಭಾನು ಮೆಹ್ತಾ, ಸಿಎಸ್‌ಡಿಎಸ್‌ನ ಮಾಜಿ ನಿರ್ದೇಶಕ ರಾಜೀವ್ ಭಾರ್ಗವ, ಜೆಎನ್‌ಯು ಮಾಜಿ ಪ್ರೊಫೆಸರ್ ನೀರಜಾ ಗೋಪಾಲ್ ಜಯಲ್, ಜೆಎನ್‌ಯು ಪ್ರೊಫೆಸರ್ ನಿವೇದಿತಾ ಮೆನನ್, ಸಿವಿಲ್ ಸೊಸೈಟಿ ವಾಚ್‌ಡಾಗ್ ಕಾಮನ್ ಕಾಸ್ ಸಂಸ್ಥೆಯ ಮುಖ್ಯಸ್ಥ ವಿಪುಲ್ ಮುದ್ಗಲ್, ಹೈದರಾಬಾದ್ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಕೆ.ಸಿ.ಸೂರಿ, ಭಾರತೀಯ ಅಧ್ಯಯನ ಸಂಸ್ಥೆಯ ಮಾಜಿ ನಿರ್ದೇಶಕ ಪೀಟರ್ ರೊನಾಲ್ಡ್ ಡಿಸೋಜ.
‘ಮೂಲ ಪಠ್ಯಪುಸ್ತಕ ಸಾಕಷ್ಟು ಪರಿಷ್ಕರಣೆಗೊಂಡಿದೆ. ಈಗ ವಿಭಿನ್ನ ಪಠ್ಯಪುಸ್ತಕವಾಗಿಯೇ ರೂಪುಗೊಂಡಿದೆ. ಇದನ್ನು ನಾವು ರೂಪಿಸಿದ್ದು ಎಂದು ಹೇಳಿಕೊಳ್ಳುವುದೂ ಕಷ್ಟವಾಗುತ್ತದೆ. ಈ ಕಾರಣದಿಂದ ಪಠ್ಯಪುಸ್ತಕಗಳಿಂದ ನಮ್ಮ ಹೆಸರು ಕೈಬಿಡಬೇಕು. ನಾವು ಸಮಷ್ಠಿಯಾಗಿ, ಸೃಜನಶೀಲತೆಯಿಂದ ಮಾಡಿದ್ದ ಪ್ರಯತ್ನವೇ ಈಗ ಅಸ್ತವ್ಯಸ್ತಗೊಂಡಿದೆ ಎಂಬುದು ನಮ್ಮ ಅಭಿಪ್ರಾಯ’ ಎಂದು ಹೇಳಿದ್ದಾರೆ.
‘ವಿಸ್ತೃತ ಚರ್ಚೆ ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು, ಚಿಂತಕರು, ಭಿನ್ನ ಸಿದ್ಧಾಂತಗಳ ಹಿನ್ನೆಲೆಯುಳ್ಳವರು, ಸ್ವಾತಂತ್ರ್ಯ ಹೋರಾಟ, ಸಂವಿಧಾನ ಚೌಕಟ್ಟು, ಪ್ರಜಾಪ್ರಭುತ್ವದ ಕಾರ್ಯವಿಧಾನ, ಭಾರತ ರಾಜಕಾರಣದ ಪ್ರಮುಖಾಂಶಗಳು, ಜಾಗತಿಕ ವಿದ್ಯಮಾನಗಳು ಕುರಿತ ಅರಿವನ್ನು ಹಂಚಿಕೊಂಡಿದ್ದವರ ಜೊತೆಗೆ, ಸಮಾಲೋಚನೆ ನಡೆಸಿದ್ದರ ಫಲವಾಗಿ ಈ ಪಠ್ಯಪುಸ್ತಕಗಳು ರಚನೆಯಾಗಿದ್ದವು’ ಎಂದು ಹೇಳಿದ್ದಾರೆ.
ಕಳೆದ ವಾರ ಎನ್‌ಸಿಇಆರ್‌ಟಿಗೆ ಪತ್ರ ಬರೆದಿದ್ದ ಯೋಗೇಂದ್ರ ಯಾದವ್ ಮತ್ತು ಫಾಲ್‌ಸಿಕರ್ ಅವರು, ‘ಪಠ್ಯಪರಿಷ್ಕರಣೆ ಕಸರತ್ತು ಪುಸ್ತಕಗಳನ್ನು ಗುರುತಿಸಲಾಗದಂತೆ ಮಾಡಿದೆ. ನಮಗೆ ಹೆಮ್ಮೆ ಎನಿಸುತ್ತಿದ್ದ ಪಠ್ಯಪುಸ್ತಕಗಳು ಈಗ ಇರಿಸುಮುರಿಸು ಮೂಡಿಸುತ್ತಿವೆ‘ ಎಂದು ಹೇಳಿದ್ದರು.
ಆದರೆ, ‘ಪಠ್ಯಪುಸ್ತಕದ ಜೊತೆಗೆ ಗುರುತಿಸಲಾದ ಹೆಸರು ಕೈಬಿಡುವ ಪ್ರಶ್ನೆ ಇಲ್ಲ. ಪಠ್ಯಪುಸ್ತಕಗಳನ್ನು ಆ ವಿಷಯದ ಜ್ಞಾನ, ಅರಿವು ಆಧರಿಸಿ ರೂಪಿಸಲಾಗುತ್ತದೆ. ಯಾವುದೇ ಹಂತದಲ್ಲಿ ವ್ಯಕ್ತಿಗತವಾಗಿ ಒಬ್ಬರು ಕರ್ತೃ ಎಂದು ಹೇಳಿಕೊಳ್ಳಲಾಗದು‘ ಎಂದು ಎನ್‌ಸಿಇಆರ್‌ಟಿ ಹೇಳಿದೆ.
ಕಳೆದ ತಿಂಗಳು ಕೆಲವು ಪಠ್ಯಗಳನ್ನು ಪುಸ್ತಕಗಳಿಂದ ಕೈಬಿಟ್ಟಿದ್ದ ಎನ್‌ಸಿಇಆರ್‌ಟಿ ಕ್ರಮ ವಿವಾದಕ್ಕೆ ಆಸ್ಪದವಾಗಿತ್ತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪ್ರತೀಕಾರ ಮನೋಭಾವದಿಂದ ಈ ಕಸರತ್ತಿಗೆ ಕೈಹಾಕಿದೆ ಎಂದು ವಿರೋಧ ಪಕ್ಷಗಳು ತೀವ್ರ ತರಾಟೆ ತೆಗೆದುಕೊಂಡಿದ್ದವು.
ಆದರೆ, ಕೆಲ ಪಠ್ಯಗಳನ್ನು ಕಣ್ತಪ್ಪಿನಿಂದ ಕೈಬಿಟ್ಟಿರುವ ಸಾಧ್ಯತೆ ಇದೆ ಎಂದು ಎನ್‌ಸಿಇಆರ್‌ಟಿ ನಂತರ ಹೇಳಿದ್ದರೂ, ತಜ್ಞರ ಸಮಿತಿಯ ಶಿಫಾರಸು ಆಧರಿಸಿ ಇದನ್ನು ಮಾಡಲಾಗಿದೆ ಎಂದು ಸಮರ್ಥಿಸಿಕೊಳ್ಳುವ ಮೂಲಕ ಕೈಬಿಟ್ಟಿದ್ದ ಪಠ್ಯ ಮರುಸೇರಿಸಲು ನಿರಾಕರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.