ನವದೆಹಲಿ: ‘2025ರ ವೇಳೆಗೆ ದೇಶದಿಂದ ಕ್ಷಯರೋಗವನ್ನು ನಿರ್ಮೂಲನೆ ಮಾಡಲು ಎಲ್ಲರೂ ಸಮರೋಪಾದಿಯಲ್ಲಿ ಸಾಂಘಿಕ ಪ್ರಯತ್ನ ನಡೆಸಬೇಕು’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ಕರೆ ನೀಡಿದ್ದಾರೆ.
‘ಪ್ರಧಾನಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನ’ಕ್ಕೆ ವರ್ಚುವಲ್ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ‘ನಿ– ಕ್ಷಯ್ 2.0’ ಪೋರ್ಟಲ್ ಅಡಿಯಲ್ಲಿ ಸರ್ಕಾರವು ಕ್ಷಯರೋಗಿಗಳಿಗೆ ಸಮುದಾಯದ ಬೆಂಬಲವನ್ನು ನೀಡುವ ಕ್ರಮವನ್ನು ಶ್ಲಾಘಿಸಿದರು.
‘ಸರ್ಕಾರ ರೂಪಿಸಿರುವ ಪೋರ್ಟಲ್ ಅಡಿಯಲ್ಲಿ ಒಬ್ಬ ವ್ಯಕ್ತಿ, ಚುನಾಯಿತಿ ಪ್ರತಿನಿಧಿ ಇಲ್ಲವೇ ಸಂಘ–ಸಂಸ್ಥೆಗಳು ದತ್ತು ಪಡೆದು ಆರೈಕೆ ಮಾಡಬಹುದಾಗಿದೆ. ಈ ಅಭಿಯಾನವನ್ನು ಜನಾಂದೋಲನವನ್ನಾಗಿ ಮಾಡಲು ಎಲ್ಲರೂ ಪ್ರಯತ್ನಿಸಬೇಕು’ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಅವರು, ‘ಪ್ರಧಾನ ಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನವು ಪ್ರಧಾನಿ ನರೇಂದ್ರ ಮೋದಿ ಅವರ ನಾಗರಿಕ ಕೇಂದ್ರಿತ ನೀತಿಗಳ ವಿಸ್ತರಣೆಯಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.