ADVERTISEMENT

ಕಾಶ್ಮೀರ: ಹಂದ್ವಾರ ಎನ್‌ಕೌಂಟರ್‌: ಕರ್ನಲ್, ಮೇಜರ್ ಸೇರಿ ಐವರು ಹುತಾತ್ಮ

ಝುಲ್ಫೀಕರ್ ಮಜೀದ್
Published 4 ಮೇ 2020, 9:29 IST
Last Updated 4 ಮೇ 2020, 9:29 IST
ಉತ್ತರ ಕಾಶ್ಮೀರದ ಹಂದ್ವಾರದಲ್ಲಿ ಉಗ್ರರ ಗುಂಡಿಗೆ ಹುತಾತ್ಮರಾದ ಸಬ್ ಇನ್‌ಸ್ಪೆಕ್ಟರ್ ಖಾಜಿ ಎಸ್.ಎ.ಪಠಾಣ್ ಅವರಿಗೆ ಹಿರಿಯ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.
ಉತ್ತರ ಕಾಶ್ಮೀರದ ಹಂದ್ವಾರದಲ್ಲಿ ಉಗ್ರರ ಗುಂಡಿಗೆ ಹುತಾತ್ಮರಾದ ಸಬ್ ಇನ್‌ಸ್ಪೆಕ್ಟರ್ ಖಾಜಿ ಎಸ್.ಎ.ಪಠಾಣ್ ಅವರಿಗೆ ಹಿರಿಯ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.   
""

ಶ್ರೀನಗರ: ಉತ್ತರ ಕಾಶ್ಮೀರದ ಹಂದ್ವಾರದಲ್ಲಿ ಉಗ್ರರೊಂದಿಗೆ ಶನಿವಾರ ರಾತ್ರಿನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಕರ್ನಲ್, ಮೇಜರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿ ಸೇರಿ ಒಟ್ಟು ನಾಲ್ವರು ಭದ್ರತಾ ಸಿಬ್ಬಂದಿಹುತಾತ್ಮರಾಗಿದ್ದಾರೆ. ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಕೊಂದುಹಾಕಿವೆ.

ಹುತಾತ್ಮ ಯೋಧರನ್ನು 21ನೇ ರಾಷ್ಟ್ರೀಯ ರೈಫಲ್ಸ್‌ನ ಕಮಾಂಡಿಂಗ್ ಆಫೀಸರ್ಕರ್ನಲ್ ಆಷುತೋಷ್ ಶರ್ಮಾ, ಮೇಜರ್ ಅನುಜ್ ಸೂದ್, ಲ್ಯಾನ್ಸ್‌ ನಾಯಕ್ ದಿನೇಶ್, ನಾಯಕ್ ರಾಜೇಶ್ ಮತ್ತು ಪೊಲೀಸ್‌ ಸಬ್ ಇನ್‌ಸ್ಪೆಕ್ಟರ್ ಶಾಗಿರ್ ಖಾಜಿ ಪಠಾಣ್ಎಂದು ಗುರುತಿಸಲಾಗಿದೆ.

ಹುತಾತ್ಮರು... ಕರ್ನಲ್ ಆಶುತೋಷ್ ಶರ್ಮಾ, ಮೇಜರ್ ಅನುಜ್ ಸೂದ್, ನಾಯಕ್ ರಾಜೇಶ್, ಲ್ಯಾನ್ಸ್ ನಾಯಕ್ ದಿನೇಶ್. ಸಬ್ ಇನ್‌ಸ್ಪೆಕ್ಟರ್ ಎಸ್.ಎ.ಖಾಜಿ

ಲಷ್ಕರ್ ಎ ತಯ್ಯಾಬಾ ಉಗ್ರಗಾಮಿ ಸಂಘಟನೆಯಸ್ವಯಂ ಘೋಷಿತ ಮುಖ್ಯ ಕಮಾಂಡರ್ ಹೈದರ್ ಮತ್ತು ಮತ್ತೋರ್ವ ಉಗ್ರ ಹತನಾಗಿದ್ದಾನೆ. ಹಂದ್ವಾರದ ಚಂಜಿಮುಲ್ಲಾದಜನವಸತಿ ಪ್ರದೇಶದಮನೆಯೊಂದರಲ್ಲಿ ಉಗ್ರರು ಅಡಗಿರುವುದನ್ನುಶನಿವಾರ ಸಂಜೆ ಸೇನೆ ಮತ್ತು ಪೊಲೀಸ್‌ ಸಿಬ್ಬಂದಿ ಪತ್ತೆಹಚ್ಚಿ, ಸುತ್ತುವರಿದರು.

ADVERTISEMENT

ರಾಜ್ವಾರ್ ಅರಣ್ಯದಿಂದ ಶುಕ್ರವಾರ ಮಧ್ಯಾಹ್ನತಪ್ಪಿಸಿಕೊಂಡಿದ್ದ ಉಗ್ರರು ಮನೆಯೊಂದರಲ್ಲಿ ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ಅರಂಭಿಸಿದರು.

‘ಮನೆಯಲ್ಲಿ ಇಬ್ಬರು ಅಥವಾ ಮೂವರು ಉಗ್ರರು ಅಡಗಿರಬಹುದು ಎಂದು ಭದ್ರತಾಪಡೆಗಳು ಅಂದಾಜಿಸಿದ್ದವು. ಆದರೆ ಅಕ್ಕಪಕ್ಕದ ಮನೆಗಳಲ್ಲಿಯೂ ಉಗ್ರರಿದ್ದರು. ಈ ಪ್ರದೇಶದಲ್ಲಿ 8ರಿಂದ 10 ಮಂದಿ ಉಗ್ರರು ಇರುವ ಸಾಧ್ಯತೆ ಇತ್ತು’ ಎಂದು ಮೂಲಗಳು ಹೇಳಿವೆ.

‘ಕಾರ್ಯಾಚರಣೆ ಆರಂಭವಾದ ನಂತರ ಉಗ್ರರು ಹಾರಿಸುತ್ತಿದ್ದ ಗುಂಡಿನಿಂದ ರಕ್ಷಣೆ ಪಡೆಯಲೆಂದು ಕರ್ನಲ್ ಶರ್ಮಾ, ಮೇಜರ್ ಅನುಜ್ ಮತ್ತು ಇತರ ಹುತಾತ್ಮ ಸಿಬ್ಬಂದಿ ಸಮೀಪದ ಮನೆಯೊಂದನ್ನು ಪ್ರವೇಶಿಸಲು ಯತ್ನಿಸಿದರು. ಆದರೆ ಅದೇ ಮನೆಯೊಳಗಿನಿಂದ ಅವರ ಮೇಲೆ ಗುಂಡು ಹಾರಿಸಿ ಕೊಲ್ಲಲಾಯಿತು’ ಎಂದು ಮೂಲಗಳು ತಿಳಿಸಿವೆ.

‘ಕತ್ತಲಿನ ಲಾಭ ಪಡೆದು ಕೆಲ ಉಗ್ರರು ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮುಂಜಾನೆ ಮೊದಲ ಬೆಳಕು ಹರಿದ ನಂತರ ಸೇನೆ ಅಂತಿಮ ದಾಳಿ ನಡೆಸಿ, ಅಲ್ಲಿದ್ದ ಇಬ್ಬರು ಉಗ್ರರನ್ನು ಕೊಂದು ಹಾಕುವಲ್ಲಿ ಯಶಸ್ವಿಯಾಯಿತು. ಈ ಪ್ರದೇಶದಲ್ಲಿ ಕೆಲ ನಾಗರಿಕರೂ ಮೃತಪಟ್ಟಿರುವ ಸಾಧ್ಯತೆಯಿದೆ’ ಎಂದು ಭದ್ರತಾಪಡೆಗಳು ಶಂಕಿಸಿವೆ.

ಕಾಶ್ಮೀರದಲ್ಲಿ 2015ರಿಂದ ಸಕ್ರಿಯನಾಗಿದ್ದ ಉಗ್ರ ಹೈದರ್ ಕಾಶ್ಮೀರದಲ್ಲಿ ಯುವಕರನ್ನು ಭಯೋತ್ಪಾದನೆಯತ್ತ ಸೆಳೆಯುತ್ತಿದ್ದ ಮುಖ್ಯವ್ಯಕ್ತಿಯಾಗಿದ್ದ. ಪಾಕ್ ಆಕ್ರಮಿತ ಕಾಶ್ಮೀರ ಈತನ ಮೂಲ ಎಂದು ಹೇಳಲಾಗಿದೆ.ಸತ್ತಿರುವ ಮತ್ತೊಬ್ಬ ಉಗ್ರನೂ ಪಾಕ್ ಆಕ್ರಮಿತ ಕಾಶ್ಮೀರಕ್ಕೇ ಸೇರಿದವನು ಎಂದು ಶಂಕಿಸಲಾಗಿದೆ.

ಐವರು ಸೈನಿಕರು ಮತ್ತು ಪೊಲೀಸ್ ಸಿಬ್ಬಂದಿಯಿದ್ದ ತಂಡ ಉಗ್ರರಿದ್ದ ಪ್ರದೇಶವನ್ನು ಪ್ರವೇಶಿಸಿತು. ನಾಗರಿಕರನ್ನು ರಕ್ಷಿಸುವ ಪ್ರಯತ್ನದಲ್ಲಿ ಭದ್ರತಾ ಸಿಬ್ಬಂದಿ ಉಗ್ರರ ಗುಂಡಿಗೆ ಹುತಾತ್ಮರಾದರು ಎಂದು ಸೇನೆ ತಿಳಿಸಿದೆ.

ಹುತಾತ್ಮ ಸೈನಿಕರು ಮತ್ತು ಪೊಲೀಸ್ ಅಧಿಕಾರಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಗೌರವ ಸಲ್ಲಿಸಿದ್ದಾರೆ.

‘ನಮ್ಮ ಧೈರ್ಯಶಾಲಿ ಯೋಧರು ಮತ್ತು ಭದ್ರತಾ ಸಿಬ್ಬಂದಿಗೆ ಪ್ರಣಾಮಗಳು. ಅವರ ತ್ಯಾಗ ಮತ್ತು ಬಲಿದಾನವನ್ನು ಮರೆಯಲು ಸಾಧ್ಯವಿಲ್ಲ. ದೇಶಕ್ಕಾಗಿ ಅತ್ಯಂತ ಭದ್ರತೆಯಿಂದ ಕೆಲಸ ಮಾಡಿದ ಅವರು ಕೊನೆ ಉಸಿರಿನವರೆಗೂ ನಾಗರಿಕರನ್ನು ರಕ್ಷಿಸಲು ಯತ್ನಿಸಿದರು. ಅವರ ಕುಟುಂಬ ಮತ್ತು ಗೆಳೆಯರಿಗೆ ನನ್ನ ಸಂತಾಪುಗಳು’ ಎಂದು ಮೋದಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.