ನವದೆಹಲಿ: ‘ವಸಾಹತುಶಾಹಿ ಆಡಳಿತವು ಭಾರತೀಯರಲ್ಲಿ ಬೆಳೆಸಿದ್ದ ಗುಲಾಮಗಿರಿ ಮನಸ್ಥಿತಿ ಸ್ವಾತಂತ್ರ್ಯದ ನಂತರವು ಮುಂದುವರಿದಿದೆ. ಇದು ಬದಲಾಗಬೇಕು’ ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದರು.
ಬಿಜೆಪಿ ಮುಖಂಡ ಬಲ್‌ಬೀರ್ ಪುಂಜ್ ಅವರ ಕೃತಿ ‘ನರೇಟಿವ್ ಕ ಮಾಯಾಜಾಲ್’ ಬಿಡುಗಡೆ ಮಾಡಿ ಶುಕ್ರವಾರ ಮಾತನಾಡಿದ ಅವರು, ‘ಬ್ರಿಟಿಷರ ಆಡಳಿತದ ಮನಸ್ಥಿತಿಯನ್ನೇ ಅವರ ‘ಏಜೆಂಟರು’ ಸ್ವಾತಂತ್ರ್ಯನಂತರವು ರಕ್ಷಿಸಿಕೊಂಡುಬರುತ್ತಿದ್ದಾರೆ’ ಎಂದು ಟೀಕಿಸಿದರು.
ಕೇರಳದ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಮತ್ತು ವಕೀಲ, ಅಂಕಣಕಾರ ಜೆ.ಸಾಯಿ ದೀಪಕ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಸಾಹತುಶಾಹಿ ಆಡಳಿತದ ಕಾರ್ಯಶೈಲಿಯನ್ನು ಉಲ್ಲೇಖಿಸಿದ ಅವರು, ‘ಭಾರತೀಯರು ಎಂದಿಗೂ ಮೊಘಲರನ್ನು ತಮಗಿಂತ ಉತ್ತಮರು ಎಂದು ಭಾವಿಸಿರಲಿಲ್ಲ. ಅವರು ದೇಶದ ಮೇಲೆ ಅತಿಕ್ರಮಣ ಮಾಡಿದಾಗಲೂ ಧೈರ್ಯದಿಂದಲೇ ಎದುರಿಸಿದ್ದರು‘ ಎಂದು ಉಲ್ಲೇಖಿಸಿದರು.
‘ವಸಾಹತುಶಾಹಿ ಆಡಳಿತದ ಕಾರ್ಯಶೈಲಿಯು ಜನರಲ್ಲಿ ಗುಲಾಮಗಿರಿಯ ಮನಸ್ಥಿತಿಯನ್ನು ಬೇರೂರಿಸಿತ್ತು. ಈ ಮನಸ್ಥಿತಿಯು ‘ನಾವು ಗುಲಾಮರು, ಬಿಳಿಯರಿಗೆ ಹೊರೆ‘ ಎಂದು ನಂಬುವಂತೆ ಮಾಡಿತ್ತು’ ಎಂದೂ ವಿಶ್ಲೇಷಿಸಿದರು.
‘ಆ ಆಡಳಿತದಲ್ಲಿ ವಿದ್ಯಾವಂತರು ಎಂದು ಹೇಳಿಕೊಂಡವರೂ ‘ನಾವು ಹಳೆಯ ಕಾಲದವರು, ನಾವು ಜಗತ್ತಿಗೆ ಏನನ್ನೂ ನೀಡಿಲ್ಲ‘ ಎಂದೇ ಭಾವಿಸಿದ್ದರು. ಸ್ವಾತಂತ್ರ್ಯದ ನಂತರ ಈ ಮನಸ್ಥಿತಿ ಬದಲಾಗಬೇಕಿತ್ತು. ಆದರೆ, ವಿಶ್ವವಿದ್ಯಾಲಯಗಳು, ಅಂತರರಾಷ್ಟ್ರೀಯ ಮಾಧ್ಯಮ, ಚಿಂತಕರ ಚಾವಡಿ, ನ್ಯಾಯಾಂಗದ ಮೂಲಕ ಬ್ರಿಟಿಷರ ‘ಏಜೆಂಟ’ರು ಉಳಿಸಿಕೊಂಡು ಬಂದರು’ ಎಂದು ಆರೋಪಿಸಿದರು.
‘ಹಿಂದೂಗಳು, ಭಾರತ, ಅದರ ಸಂಸ್ಕೃತಿ ಹಾಗೂ ಇದಕ್ಕೆ ಸಂಬಂಧಿಸಿದ ಎಲ್ಲದರ ಬಗ್ಗೆಯೂ ದ್ವೇಷ ಮೂಡಿಸುವ ಹಾಗೂ ಭಾರತೀಯರು ಅಭಿವೃದ್ಧಿ ಹಾಗೂ ವಿಜ್ಞಾನದ ವಿರುದ್ಧ ಎಂಬ ಅಭಿಪ್ರಾಯವನ್ನು ಬೇರೂರಿಸುವ ಹಲವು ಪ್ರಯತ್ನಗಳು ನಡೆದವು. ವಿದ್ಯಾವಂತರು ಎಂದು ಕೊಂಡವರು, ಮಾಧ್ಯಮಗಳು ಅದನ್ನು ಒಪ್ಪಿಕೊಂಡಿದ್ದವು. ಈಗಲೂ ಯೂರೋಪ್ ಕೇಂದ್ರೀತ ಚಿಂತನೆಗಳು ನಮ್ಮ ಬದುಕು, ಶಿಕ್ಷಣ ವ್ಯವಸ್ಥೆ ಹಾಗೂ ಸಮಾಜದಲ್ಲಿ ಹಾಸುಹೊಕ್ಕಾಗಿದೆ. ವಸಾಹತುಶಾಹಿ ಮನಸ್ಥಿತಿಯಿಂದ ನಾವು ಹೊರಬರದೇ ಇದು ಬದಲಾಗುವುದಿಲ್ಲ’ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಆರಿಫ್ ಮೊಹಮ್ಮದ್ ಖಾನ್ ಅವರು, ‘ಆರ್‌ಎಸ್‌ಎಸ್ ಸಂಘಟನೆಯ ಹೆಸರನ್ನು ಉಲ್ಲೇಖಿಸದೆಯೇ ಹಲವು ಸಾಮಾಜಿಕ ಸಂಘಟನೆಗಳು ಸಮಾಜದಲ್ಲಿ ಬದಲಾವಣೆಯನ್ನು ತರಲು ಶ್ರಮಿಸುತ್ತಿವೆ‘ ಎಂದು ಅಭಿಪ್ರಾಯಪಟ್ಟರು.
‘ಉದ್ದೇಶಪೂರ್ವಕವಾಗಿ ನಾನು ಸಂಘಟನೆಯ ಹೆಸರು ಉಲ್ಲೇಖಿಸುತ್ತಿಲ್ಲ. ನಾನು ನಾಗಪುರಕ್ಕೆ ಹೋಗಿದ್ದೆ. ವಿಶ್ವವಿದ್ಯಾಲಯವೊಂದು ನನ್ನನ್ನು ಅಲ್ಲಿಗೆ ಆಹ್ವಾನಿಸಿತ್ತು. ಅಲ್ಲಿ ಕೆಲವರನ್ನು ಭೇಟಿ ಮಾಡಿದೆ. ನೀವು ಸಾಕಷ್ಟು ಕೆಲಸ ಮಾಡುತ್ತಿದ್ದೀರಿ ಎಂದೂ ಹೇಳಿದೆ. ಈ ಪೈಕಿ ನನಗೆ ಹೆಚ್ಚು ಇಷ್ಟವಾದ ಅಂಶವೆಂದರೆ ಏಕಲ ವಿದ್ಯಾಲಯಗಳು’ ಎಂದು ಹೇಳಿದರು.
ಏಕಲ ವಿದ್ಯಾಲಯ ಫೌಂಡೇಷನ್ ಅನ್ನು ಈಗ ಜಾರ್ಖಂಡ್‌ನಲ್ಲಿರುವ ಗುಮ್ಲಾ ಜಿಲ್ಲೆಯಲ್ಲಿ 1986ರಲ್ಲಿ ಸ್ಥಾಪಿಸಲಾಗಿತ್ತು. ಏಕ ಶಿಕ್ಷಕ ಶಾಲೆ ಚಿಂತನೆಯು ಬಾವುರಾವ್ ದೇವರಸ್ ಅವರದಾಗಿತ್ತು. ಇವರು ಆರ್‌ಎಸ್‌ಎಸ್‌ನ ಮೂರನೇ ಸರಸಂಘಚಾಲಕರಾಗಿದ್ದ ಮಧುಕರ್ ದತ್ತಾತ್ರೇಯ ದೇವರಸ್ ಅವರ ಕಿರಿಯ ಸಹೋದರರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.