ADVERTISEMENT

ಜಾತಿ ಗಣತಿ |ಮೀಸಲಾತಿ ಹಂಚಿಕೆಯ ನೀಲನಕ್ಷೆಯೊಂದಿಗೆ ಬನ್ನಿ: ‘ಕೈ’ಗೆ ರಾಜನಾಥ್ ಸವಾಲು

ಪಿಟಿಐ
Published 15 ನವೆಂಬರ್ 2024, 13:38 IST
Last Updated 15 ನವೆಂಬರ್ 2024, 13:38 IST
ರಾಜನಾಥ್‌ ಸಿಂಗ್‌
ರಾಜನಾಥ್‌ ಸಿಂಗ್‌   

ರಾಂಚಿ: ಅಧಿಕಾರಕ್ಕೆ ಬಂದರೆ ‘ಜಾತಿ ಗಣತಿ’ ನಡೆಸುವ ಭರವಸೆ ನೀಡಿರುವ ಕಾಂಗ್ರೆಸ್‌ ಮತ್ತು ಅದರ ನಾಯಕ ರಾಹುಲ್‌ ಗಾಂಧಿ ಅವರನ್ನು ಟೀಕಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ‘ರಾಜಕೀಯ ಲಾಭಕ್ಕಾಗಿ ಮತಗಳನ್ನು ಸೆಳೆಯಲು ಕಾಂಗ್ರೆಸ್‌ನವರು ಮಾಡುತ್ತಿರುವ ತಂತ್ರ ಇದು’ ಎಂದು ಶುಕ್ರವಾರ ಆರೋಪಿಸಿದರು. 

ಜಾರ್ಖಂಡ್‌ನ ಮಹಾಗಾಮಾದಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸಿಂಗ್‌, ದೇಶದಲ್ಲಿರುವ ಹಲವು ಜಾತಿಗಳು ಮತ್ತು ಉಪಜಾತಿಗಳಿಗೆ ಮೀಸಲಾತಿಯ ಲಾಭಗಳನ್ನು ಹಂಚುವುದಕ್ಕಾಗಿ ವ್ಯವಸ್ಥಿತವಾದ ಯೋಜನೆಯನ್ನು ರೂಪಿಸುವಂತೆಯೂ ಅವರು ಕಾಂಗ್ರೆಸ್‌ಗೆ ಸವಾಲು ಹಾಕಿದರು. 

‘2011ರಲ್ಲಿ ಸಾಮಾಜಿಕ ಆರ್ಥಿಕ ಜಾತಿ ಗಣತಿ ನಡೆಸಲಾಗಿದೆ. 46 ಲಕ್ಷ ಜಾತಿಗಳು, ಉಪಜಾತಿಗಳು ಮತ್ತು ಗೋತ್ರಗಳಿರುವುದು ಅವರಿಂದ ತಿಳಿದುಬಂದಿದೆ. ಸಮಾಜ ಕಲ್ಯಾಣ ಸಚಿವಾಲಯದ ಪ್ರಕಾರ, ದೇಶದಲ್ಲಿ 1,200 ಪರಿಶಿಷ್ಟ ಜಾತಿಗಳಿವೆ, 750 ಪರಿಶಿಷ್ಟ ಪಂಗಡಗಳಿವೆ ಮತ್ತು 2,500ದಷ್ಟು ಇತರ ಹಿಂದುಳಿದ ವರ್ಗಗಳಿವೆ. ಇಷ್ಟೊಂದು ಗುಂಪುಗಳಿಗೆ ಕಾಂಗ್ರೆಸ್‌ ಯಾವ ರೀತಿ ಮೀಸಲಾತಿ ಕೋಟಾಗಳನ್ನು ಹಂಚಿಕೆ ಮಾಡುತ್ತದೆ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಅಂತಹ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲು ಕಾಂಗ್ರೆಸ್‌ ಸ್ಪಷ್ಟವಾದ ನೀಲನಕ್ಷೆಯನ್ನು ಮುಂದಿಡಬೇಕು’ ಎಂದೂ ರಾಜನಾಥ್‌ ಸಿಂಗ್‌ ಆಗ್ರಹಿಸಿದರು.  

ಕಾಂಗ್ರೆಸ್‌ ಅವಕಾಶವಾದಿ ರಾಜಕಾರಣದಲ್ಲಿ ತೊಡಗಿದೆ ಎಂದು ಆರೋಪಿಸಿದ ಅವರು, ‘ಬಿಹಾರದಲ್ಲಿ ಆರ್‌ಜೆಡಿ, ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ನಂತಹ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಆ ಪಕ್ಷಗಳನ್ನು ನಾಶ ಮಾಡಿದೆ. ಈಗ ತಮಿಳುನಾಡಿನಲ್ಲಿ ಡಿಎಂಕೆಯನ್ನು ಮುಗಿಸುವುದಕ್ಕೆ ಹೊರಟಿದೆ. ಅಧಿಕಾರಕ್ಕೆ ಏರಲು  ಮೈತ್ರಿ ಪಕ್ಷಗಳನ್ನು ಬಳಸಿಕೊಳ್ಳುವ ಕಾಂಗ್ರೆಸ್‌, ಅಂತಿಮವಾಗಿ ತನ್ನ ಮಿತ್ರಪಕ್ಷಗಳಿಗೇ ಹಾನಿ ಮಾಡುತ್ತದೆ’ ಎಂದು ದೂರಿದರು.  

ದೇಶದಲ್ಲಿ ಎಷ್ಟು ಜಾತಿಗಳಿವೆ ಎಂಬುದನ್ನು ರಾಹುಲ್‌ ಗಾಂಧಿ ಹೇಳಬೇಕು. ರಾಜಕೀಯವು ಜನರ ಸೇವೆಗಾಗಿ ಇರುವುದೇ ವಿನಾ ಸರ್ಕಾರ ರಚಿಸುವುದಕ್ಕಾಗಿ ಮಾತ್ರ ಅಲ್ಲ
ರಾಜನಾಥ್‌ ಸಿಂಗ್‌ ರಕ್ಷಣಾ ಸಚಿವ
‘ರಾಜ್ಯ ಸರ್ಕಾರ ಭ್ರಷ್ಟ’
ಜಾರ್ಖಂಡ್‌ನ ಆಡಳಿತಾರೂಢ ಜೆಎಂಎಂ–ಕಾಂಗ್ರೆಸ್‌–ಆರ್‌ಜೆಡಿ ಮೈತ್ರಿ ಕೂಟವು ವ್ಯಾಪಾಕ ಭ್ರಷ್ಟಾಚಾರದಲ್ಲಿ ತೊಡಗಿದ್ದು ಮರಣ ಪ್ರಮಾಣ ಪತ್ರ ನೀಡುವುದಕ್ಕೂ ಲಂಚ ಪಡೆಯುತ್ತಿದೆ ಎಂದು ರಾಜನಾಥ್‌ ಸಿಂಗ್‌ ಆರೋಪಿಸಿದರು.  ‘ಬಿಜೆಪಿ ಯಾವತ್ತೂ ಭ್ರಷ್ಟಾಚಾರದಲ್ಲಿ ತೊಡಗಿಲ್ಲ. ಇದುವರೆಗೆ 13 ಮುಖ್ಯಮಂತ್ರಿಗಳು ಜಾರ್ಖಂಡ್‌ನಲ್ಲಿ ಆಡಳಿತ ನಡೆಸಿದ್ದು ಈ ಪೈಕಿ ಬಿಜೆಪಿಯ ಮೂವರು ಮುಖ್ಯಮಂತ್ರಿಗಳು ಕೂಡ ಯಾವುದೇ ಭ್ರಷ್ಟಾಚಾರ ಆರೋಪಗಳನ್ನು ಎದುರಿಸಿರಲಿಲ್ಲ ಅಥವಾ ಜೈಲಿಗೂ ಹೋಗಿರಲಿಲ್ಲ’ ಎಂದರು.  ‘ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದು ಮೊದಲ ಹಂತದಲ್ಲಿ ಮತದಾನ ನಡೆದ 43 ಕ್ಷೇತ್ರಗಳ ಪೈಕಿ ಮೂರನೇ ಎರಡು ಕ್ಷೇತ್ರಗಳಲ್ಲಿ ಪಕ್ಷ ಜಯಗಳಿಸಲಿದೆ’ ಎಂದು ಹೇಳಿದರು.  ‘ಮೊದಲ ಹಂತದಲ್ಲಿ ಶೇ 3ರಷ್ಟು ಹೆಚ್ಚು ಮತದಾನವಾಗಿರುವುದು ರಾಜ್ಯದಲ್ಲಿ ಎನ್‌ಡಿಎ ಸರ್ಕಾರಕ್ಕೆ ಬೆಂಬಲ ಸಿಕ್ಕಿದೆ ಎಂಬುದರ ಸಂಕೇತ. ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದಲ್ಲಿ ಸ್ಥಿರ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರ ಬರಲಿದೆ ಎಂಬುದನ್ನು ಇದು ಸೂಚಿಸಿದೆ’ ಎಂದು ರಾಜನಾಥ್‌ ಸಿಂಗ್‌ ಹೇಳಿದರು. 

ಅಲ್ಪಸಂಖ್ಯಾತರಿಗೆ ಮೀಸಲಾತಿ– ಕಾಂಗ್ರೆಸ್‌ ಬಯಕೆ: ನಡ್ಡಾ

ಠಾಣೆ (ಮಹಾರಾಷ್ಟ್ರ): ‘ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಸಂವಿಧಾನದ ಬಗ್ಗೆ ಲವಲೇಶವೂ ಗೊತ್ತಿಲ್ಲ.  ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು
ನೀಡಿಲ್ಲ ಎಂಬುದನ್ನು ಅರಿಯದೇ ಅವರು ಹೋದ ಕಡೆ ಎಲ್ಲ ಸಂವಿಧಾನ ಪ್ರತಿಯನ್ನು ಪ್ರದರ್ಶಿಸುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶುಕ್ರವಾರ ಆರೋಪಿಸಿದರು. 

ಠಾಣೆಯಲ್ಲಿ ಚಿಂತಕರನ್ನು ಉದ್ದೇಶಿಸಿ ಮಾತನಾಡಿದ ಅವರು,  ‘ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ
ಎಸ್‌ಸಿ ಎಸ್‌ಟಿಗಳಿಗೆ ಇರುವ ಮೀಸಲಾತಿ ಸೌಲಭ್ಯವನ್ನು ಅಲ್ಪಸಂಖ್ಯಾತರಿಗೆ ನೀಡಲು ಕಾಂಗ್ರೆಸ್‌ ಬಯಸುತ್ತಿದೆ’ ಎಂದೂ ಅವರು ದೂರಿದರು. 

‘ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದಕ್ಕೆ ಸಂವಿಧಾನ ಅವಕಾಶ ನೀಡುವುದಿಲ್ಲ ಎಂಬುದು ಗಾಂಧಿಯವರಿಗೆ ತಿಳಿದಿಲ್ಲ. ‘ತಮ್ಮ ಪ್ರೀತಿಯ ಅಂಗಡಿಯಲ್ಲಿ (ಮೊಹಬ್ಬತ್‌ ಕೀ ದುಕಾನ್‌) ಅವರು ದ್ವೇಷದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ’ ಎಂದು ನಡ್ಡಾ ಟೀಕಿಸಿದರು.

‘ನಾವು ಓಲೈಕೆ ಮತ್ತು ಮತ ಬ್ಯಾಂಕ್‌ ರಾಜಕಾರಣವನ್ನು ನಾವು ತಡೆಯಬೇಕಿದೆ. ಪ್ರಧಾನಿ ಮೋದಿ ಅವರು ಯಾರೊಬ್ಬರಿಗೂ ತಾರತಮ್ಯ ಮಾಡಿಲ್ಲ’ ಎಂದು ನಡ್ಡಾ ಹೇಳಿದರು. 

ಈ ಬಾರಿಯ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮತ್ತು ಈಗ ನಡೆಯುತ್ತಿರುವ ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭಾ ಚುನಾವಣಾ ಪ್ರಚಾರಗಳಲ್ಲಿ ರಾಹುಲ್‌ ಗಾಂಧಿ ಅವರು ಸಂವಿಧಾನದ ಪ್ರತಿಯನ್ನು ಪ್ರದರ್ಶಿಸುತ್ತಾ, ‘ಬಿಜೆಪಿಯು ಸಂವಿಧಾನವನ್ನು ಬದಲಾಯಿಸಲು ಮತ್ತು ಮೀಸಲಾತಿಯನ್ನು ತೆಗೆದು ಹಾಕಲು ಬಯಸಿದೆ’ ಎಂದು ಹೇಳುತ್ತಾ ಬಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.