ADVERTISEMENT

ಪ್ರಧಾನಿ ಮೋದಿ ವಿರುದ್ಧ ಸ್ಪರ್ಧೆ ಬಯಸಿದ್ದ ಶ್ಯಾಮ್ ರಂಗೀಲಾ ನಾಮಪತ್ರ ತಿರಸ್ಕೃತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮೇ 2024, 2:50 IST
Last Updated 16 ಮೇ 2024, 2:50 IST
   

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸುತ್ತಿರುವ ವಾರಾಣಸಿ ಕ್ಷೇತ್ರದಿಂದ ಹಾಸ್ಯ ಕಲಾವಿದ ಶ್ಯಾಮ್ ರಂಗೀಲಾ ಸೇರಿದಂತೆ 36 ಅಭ್ಯರ್ಥಿಗಳ ನಾಮಪತ್ರಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್‌ ಸೇರಿದಂತೆ 15 ಅಭ್ಯರ್ಥಿಗಳ ನಾಮಪತ್ರಗಳನ್ನು ಸ್ವೀಕರಿಸಲಾಗಿದೆ ಎಂಬ ಮಾಹಿತಿಯನ್ನು ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಹಾಸ್ಯದ ಮೂಲಕ ಹಿಂದಿ ಭಾಷಿಕ ರಾಜ್ಯಗಳಲ್ಲಿ ಜನಪ್ರಿಯತೆ ಗಳಿಸಿರುವ ಶ್ಯಾಮ್‌ ರಂಗೀಲಾ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಇತ್ತೀಚೆಗೆ ಘೋಷಿಸಿದ್ದರು. ನಾಮಪತ್ರ ಸಲ್ಲಿಸುವ ಕೊನೆಯ ದಿನ ಮೇ 14ರಂದು ವಾರಾಣಸಿಗೆ ಬಂದು ನಾಮಪತ್ರ ಸಲ್ಲಿಸಿದ್ದರು.

ADVERTISEMENT

ನಾಮಪತ್ರ ತಿರಸ್ಕೃತಗೊಂಡಿರುವ ಬಗ್ಗೆ ಎಕ್ಸ್‌ನಲ್ಲಿ ಅಸಮಾಧಾನ ಹೊರಹಾಕಿರುವ ಶ್ಯಾಮ್ ರಂಗೀಲಾ, ‘ವಾರಾಣಸಿಯಿಂದ ಸ್ಪರ್ಧಿಸಲು ಬಿಡುವುದಿಲ್ಲ ಎಂದು ನಿರೀಕ್ಷಿಸಿದ್ದೆ. ಅದು ಈಗ ನಿಜವಾಗಿದೆ. ವಿಷಯ ತಿಳಿದು ನೋವಾಯಿತು. ಆದರೆ ನನ್ನ ಉತ್ಸಾಹ ಕುಂದಿಲ್ಲ. ಯಾವುದೇ ಕಾರಣಕ್ಕೂ ನನಗೆ ಕರೆ ಮಾಡಿ ತೊಂದರೆಕೊಡಬೇಡಿ ಎಂದು ಮಾಧ್ಯಮಗಳು ಮತ್ತು ಹಿತೈಷಿಗಳಿಗೆ ಕೇಳಿಕೊಳ್ಳುತ್ತೇನೆ. ನನ್ನ ಬಳಿ ಏನೇ ಮಾಹಿತಿ ಇದ್ದರೂ ಅದನ್ನು ಇಲ್ಲಿ ಹಂಚಿಕೊಳ್ಳುತ್ತಲೇ ಇರುತ್ತೇನೆ’ ಎಂದಿದ್ದಾರೆ.

ವಾರಾಣಸಿ ಕ್ಷೇತ್ರದಿಂದ 55 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿತ್ತು. ಮೇ 14 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮೇ 15ರಂದು ನಾಮಪತ್ರ ಪರಿಶೀಲನೆ ನಡೆಸಲಾಗಿತ್ತು.

ವಾರಾಣಸಿಯಲ್ಲಿ ಜೂನ್ 1 ರಂದು 7ನೇ ಮತ್ತು ಕೊನೆಯ ಹಂತದ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.