ನವದೆಹಲಿ: ಎಸ್‌ಸಿ, ಎಸ್‌ಟಿಯಲ್ಲಿ ಕೆನೆಪದರಕ್ಕೆ ಅವಕಾಶವಿಲ್ಲ. ಈ ವಿಚಾರದಲ್ಲಿ ಎನ್‌ಡಿಎ ಸರ್ಕಾರ ಸಂವಿಧಾನಕ್ಕೆ ಬದ್ಧವಾಗಿ ಇರಲಿದೆ ಎಂಬ ಅಭಿಪ್ರಾಯ ನಿನ್ನೆ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಹೊರಹೊಮ್ಮಿದೆ.
ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಅಂಬೇಡ್ಕರ್ ಅವರು ನೀಡಿರುವ ಸಂವಿಧಾನಕ್ಕೆ ನಾವು ಹಾಗೂ ನಮ್ಮ ಎನ್‌ಡಿಯ ಕುಟುಂಬ ಬದ್ಧವಾಗಿರುತ್ತದೆ. ಅಂಬೇಡ್ಕರ್ ಸಂವಿಧಾನದಲ್ಲಿ ಕೆನೆಪದರಕ್ಕೆ ಅವಕಾಶವಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಇಲಾಖೆ ಸಚಿವರು ಈ ವಿಷಯ ಎತ್ತಿದರೇ ಎಂಬ ಪ್ರಶ್ನೆಗೆ ವೈಷ್ಣವ್ ಅವರು ಉತ್ತರಿಸಲು ನಿರಾಕರಿಸಿದರು.
ಸಂಪುಟ ಸಭೆಯಲ್ಲಿ ಕೆನೆಪದರ ವಿಷಯವನ್ನು ಒಂದು ವಿಷಯವನ್ನಾಗಿ ಎತ್ತಿಕೊಳ್ಳಲಾಗಿತ್ತು. ಎಸ್‌ಸಿ, ಎಸ್‌ಟಿಯಲ್ಲಿ ಕೆನೆಪದರಕ್ಕೆ ಅವಕಾಶವಿಲ್ಲ. ಈ ವಿಚಾರದಲ್ಲಿ ಎನ್‌ಡಿಎ ಸರ್ಕಾರ ಸಂವಿಧಾನಕ್ಕೆ ಬದ್ಧವಾಗಿ ಇರಲಿದೆ ಎಂದು ಪ್ರತಿಪಾದಿಸಿದರು.
ಎಸ್‌ಸಿ, ಎಸ್‌ಟಿಗಳಲ್ಲಿ ಕೆನೆಪದರಕ್ಕೆ ಸೇರಿದವರನ್ನು ಗುರುತಿಸಲು ಮತ್ತು ಅವರಿಗೆ ಮೀಸಲಾತಿಯ ಸೌಲಭ್ಯವನ್ನು ನಿರಾಕರಿಸಲು ರಾಜ್ಯ ಸರ್ಕಾರಗಳು ನೀತಿ ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ಆಗಸ್ಟ್ 1ರಂದು ಹೇಳಿತ್ತು.
ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಭಾಗವಾಗಿ ಕೆನೆಪದರದ ಅಭಿಪ್ರಾಯ ಸುಪ್ರೀಂನಿಂದ ಬಂದಿತ್ತು.
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಂಸದರ ನಿಯೋಗವು, ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.