ADVERTISEMENT

ಕುಲಭೂಷಣ್ ಜಾಧವ್ ಪ್ರಾಣ ರಕ್ಷಣೆಗೆ ಬದ್ಧರಾಗಿದ್ದೇವೆ: ಭಾರತ

ಪಿಟಿಐ
Published 31 ಜುಲೈ 2020, 1:30 IST
Last Updated 31 ಜುಲೈ 2020, 1:30 IST
ಕುಲಭೂಷಣ್‍ ಜಾಧವ್‍
ಕುಲಭೂಷಣ್‍ ಜಾಧವ್‍   

ನವದೆಹಲಿ: ಪಾಕಿಸ್ತಾನದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‍ ಜಾಧವ್‍ ಅವರ ಪ್ರಾಣ ರಕ್ಷಣೆಗೆ ಬದ್ಧ ಎಂದು ಭಾರತ ಗುರುವಾರ ಹೇಳಿದೆ. ಜಾಧವ್ ಅವರ ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆಗೆ ಇಸ್ಲಾಮಾಬಾದ್ ಹೈಕೋರ್ಟ್ ದ್ವಿಸದಸ್ಯ ಪೀಠ ರಚಿಸಿದೆ ಎಂಬ ವರದಿಗಳ ಬೆನ್ನಲ್ಲೇ ಈ ಹೇಳಿಕೆ ನೀಡಲಾಗಿದೆ.

‘ಹೆಚ್ಚಿನ ಪರಿಹಾರ ಪಡೆಯುವ ಹಕ್ಕಿನ ವಿಷಯದಲ್ಲಿ ನಾವು ನಮ್ಮ ಸ್ಥಾನವನ್ನು ಕಾಯ್ದಿರಿಸಿದ್ದೇವೆ. ಈ ಪ್ರಕರಣದಲ್ಲಿ ನಮಗೆ ಲಭ್ಯವಿರುವ ಪರಿಣಾಮಕಾರಿ ಪರಿಹಾರದ ಎಲ್ಲ ಮಾರ್ಗಗಳನ್ನು ಪಾಕಿಸ್ತಾನ ನಿರ್ಬಂಧಿಸಿತ್ತು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

ಜಾಧವ್ ಭೇಟಿಗೆ ಅವಕಾಶ ಮಾಡಿಕೊಡಬೇಕು ಎಂಬ ಅಂತರರಾಷ್ಟ್ರೀಯ ನ್ಯಾಯಾಲಯದ ಆದೇಶವನ್ನು ಪಾಕಿಸ್ತಾನ ಉಲ್ಲಂಘಿಸುತ್ತಲೇ ಇದೆ ಎಂದು ಭಾರತ ಆರೋಪಿಸುತ್ತಲೇ ಬಂದಿದೆ. ಈ ನಡುವೆಯೇ, ಏಕಪಕ್ಷೀಯವಾಗಿ ಕ್ರಮಕ್ಕೆ ಮುಂದಾಗಿದ್ದ ಪಾಕಿಸ್ತಾನ ಜಾಧವ್ ಪರ ವಾದ ಮಂಡಿಸಲು ವಕೀಲರನ್ನು ನೇಮಕ ಮಾಡುವಂತೆ ಜುಲೈ 22ರಂದು ಇಸ್ಲಾಮಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವುದಕ್ಕೂ ಮುನ್ನ ಪಾಕಿಸ್ತಾನವು ನಮ್ಮನ್ನು ಸಂಪರ್ಕಿಸಿಲ್ಲ ಎಂದು ಭಾರತ ಹೇಳಿದೆ.

ADVERTISEMENT

ಭಯೋತ್ಪಾದನೆ ಸಂಚು ಆರೋಪದಲ್ಲಿ ಜಾಧವ್ ಅವರಿಗೆ ಪಾಕ್‍ ಸೇನಾ ನ್ಯಾಯಾಲಯ 2017ರ ಏಪ್ರಿಲ್‌ನಲ್ಲಿ ಮರಣದಂಡನೆ ಶಿಕ್ಷೆಯನ್ನು ವಿಧಿಸಿತ್ತು. ಬಳಿಕ ಭಾರತವು ಪ್ರಕರಣವನ್ನು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವಂತೆ ಮಾಡಿತ್ತು. ಮರಣದಂಡನೆ ತೀರ್ಪಿನ ಬಗ್ಗೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಲು ಜಾಧವ್ ನಿರಾಕರಿಸಿದ್ದಾರೆ ಎಂದು ಇತ್ತೀಚೆಗಷ್ಟೇ ಪಾಕಿಸ್ತಾನ ಹೇಳಿತ್ತು. ನಂತರ, ಅವರ ಜೊತೆ ಮೂರನೇ ಭೇಟಿಗೆ ಭಾರತಕ್ಕೆ ಅವಕಾಶ ಕಲ್ಪಿಸಲು ಬದ್ಧ ಎಂದೂ ಹೇಳಿತ್ತು.ಆದಾಗ್ಯೂ ಸದ್ದಿಲ್ಲದೇ, ಜಾಧವ್‌ ಪರ ವಾದ ಮಂಡಿಸಲು ವಕೀಲರನ್ನು ನೇಮಕ ಮಾಡುವಂತೆ ಅರ್ಜಿ ಸಲ್ಲಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.