ಹೈದರಾಬಾದ್ : ಪರಿಶಿಷ್ಟ ಜಾತಿಗಳ ವರ್ಗೀಕರಣದ ಬೇಡಿಕೆಗೆ ಸಂಬಂಧಿಸಿದಂತೆ ಮಾದಿಗರ ( ಎಸ್‌ಸಿ ಸಮುದಾಯ) ಸಬಲೀಕರಣಕ್ಕಾಗಿ ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಅಳವಡಿಸಿಕೊಳ್ಳಲು ಕೇಂದ್ರವು ಶೀಘ್ರದಲ್ಲೇ ಸಮಿತಿ ರಚಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಮಾದಿಗರ ಸಮುದಾಯದ ಸಂಘಟನೆಯಾದ ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಂಆರ್‌ಪಿಎಸ್) ಆಯೋಜಿಸಿದ್ದ ರ್‍ಯಾಲಿಯಲ್ಲಿ ಮಾತನಾಡಿದರು.
‘ಮೂರು ದಶಕಗಳಿಂದ ಪ್ರತಿಯೊಂದು ಹೋರಾಟದಲ್ಲೂ ಬಿಜೆಪಿ ನಿಮ್ಮೊಂದಿಗೆ ನಿಂತಿದೆ. ಈ ಅನ್ಯಾಯವನ್ನು ಆದಷ್ಟು ಬೇಗ ಕೊನೆಗೊಳಿಸಲು ಬದ್ಧರಾಗಿದ್ದೇವೆ. ನಿಮ್ಮನ್ನು ಸಬಲೀಕರಿಸಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಅಳವಡಿಸಿಕೊಳ್ಳುವ ಸಮಿತಿಯನ್ನು ಶೀಘ್ರದಲ್ಲೇ ರಚಿಸುತ್ತೇವೆ ಎಂಬ ಭರವಸೆ ನೀಡಲಾಗುವುದು. ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂಬುದೂ ನಿಮಗೆ ತಿಳಿದಿದೆ. ನಿಮ್ಮ ಹೋರಾಟ ನ್ಯಾಯಯುತವೆಂದು ಪರಿಗಣಿಸುತ್ತೇವೆ’ ಎಂದು ಅವರು ತಿಳಿಸಿದರು.
‘ನಾವು ನ್ಯಾಯವನ್ನು ಖಾತರಿಪಡಿಸುತ್ತೇವೆ. ನ್ಯಾಯಾಲಯದಲ್ಲಿಯೂ ನಿಮಗೆ ನ್ಯಾಯ ಸಿಗುವಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ’ ಎಂದರು.
ಕಾಂಗ್ರೆಸ್ ಪಕ್ಷವು ಬಿ.ಆರ್.ಅಂಬೇಡ್ಕರ್ ಅವರು ಚುನಾವಣೆಯಲ್ಲಿ ಗೆಲ್ಲಲು ಅವಕಾಶ ನೀಡಲಿಲ್ಲ ಮತ್ತು ಸಂಸತ್ತಿನಲ್ಲಿ ಬಾಬಾ ಸಾಹೇಬ್ ಅವರ ಚಿತ್ರವನ್ನು ಹಾಕಿಲ್ಲ. ಅಂಬೇಡ್ಕರ್ ಅವರಿಗೆ ದಶಕಗಳಿಂದ ಭಾರತ ರತ್ನ ನೀಡದಿರುವುದಕ್ಕೆ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೇಂದ್ರದಲ್ಲಿ ಬಿಜೆಪಿ ಬೆಂಬಲಿತ ಸರ್ಕಾರ ರಚನೆಯಾದ ನಂತರವೇ ಇದು ಸಾಧ್ಯವಾಯಿತು ಎಂದರು.
ಬಿಆರ್‌ಎಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಪ್ರತ್ಯೇಕ ರಾಜ್ಯ ಹೋರಾಟ ಸಂದರ್ಭದಲ್ಲಿ ದಲಿತ ಸಮುದಾಯದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ರಾಜ್ಯ ರಚನೆಯಾದ ಬಳಿಕ ಕೆ.ಚಂದ್ರಶೇಖರ ರಾವ್ ಅವರು ದಲಿತರ ಆಕಾಂಕ್ಷೆಗಳನ್ನು ಹತ್ತಿಕ್ಕುವ ಮೂಲಕ ಮುಖ್ಯಮಂತ್ರಿ ಕುರ್ಚಿ ಅತಿಕ್ರಮಿಸಿದರು. ಬಿಆರ್‌ಎಸ್ ದಲಿತ ವಿರೋಧಿ ಮತ್ತು ಕಾಂಗ್ರೆಸ್ ಕೂಡ ಅದಕ್ಕಿಂತ ಕಡಿಮೆಯೇನಿಲ್ಲ ಎಂದು ಟೀಕಿಸಿದರು.
‘ರಾಜಕೀಯ ಪಕ್ಷಗಳು ಮತ್ತು ನಾಯಕರು ಈ ಹಿಂದೆ ಮಾದಿಗ ಸಮುದಾಯಕ್ಕೆ ಭರವಸೆಗಳನ್ನು ನೀಡಿ, ಅವರಿಗೆ ದ್ರೋಹ ಬಗೆದಿದ್ದಾರೆ. ಅವರ ಪಾಪಗಳಿಗೆ ನಾನು ಕ್ಷೇಮಯಾಚಿಸುತ್ತೇನೆ’ ಎಂದು ಮೋದಿ ಹೇಳಿದರು.
ಭಾಷಣದ ಬಳಿಕ ಭಾವುಕರಾದ ಎಂಆರ್‌ಪಿಎಸ್ ಸಂಸ್ಥಾಪಕ ಕೃಷ್ಣ ಮಾದಿಗ ಅವರನ್ನು ಮೋದಿ ಅವರು ಅಪ್ಪಿಕೊಂಡು ಸಮಾಧಾನಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.