ವಡೋದರಾ (ಗುಜರಾತ್): ವಡೋದರಾದಲ್ಲಿ ದೀಪಾವಳಿ ದಿನದ ರಾತ್ರಿ ಕೋಮು ಘರ್ಷಣೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹಲವರ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ನಗರದ ಪಾಣಿಗೇಟ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಘರ್ಷಣೆ ನಡೆದಿದೆ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ.
ಸ್ಥಳೀಯ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿರುವ ವಡೋದರಾ ಉಪ ಪೊಲೀಸ್ ಆಯುಕ್ತ ಯಶ್‌ಪಾಲ್ ಜಗನಿಯ ‘ಹಿಂಸಾಚಾರಕ್ಕೆ ನಿಖರವಾದ ಕಾರಣ ಇನ್ನೂ ಗೊತ್ತಾಗಿಲ್ಲ. ಘಟನೆಯ ಬಗ್ಗೆ ತಿಳಿದುಬಂದ ಕ್ಷಣವೇ ನಗರದಾದ್ಯಂತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ. ಮನೆಯ ಮಹಡಿಯಿಂದ ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದ್ದು, ಈ ಸಂಬಂಧ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಘರ್ಷಣೆ ಸಂಭವಿಸುವ ಮೊದಲು ಬೀದಿ ದೀಪಗಳನ್ನು ಆರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ, ನಂತರ ಎರಡು ಕಡೆಯಿಂದ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಕಾಲೇಜು ಬಳಿ ಪಟಾಕಿ ಸಿಡಿಸುವ ವಿಚಾರವಾಗಿ ಘರ್ಷಣೆ ಆರಂಭವಾಯಿತು ಎಂದು ಸ್ಥಳೀಯರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.