ನವದೆಹಲಿ: ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದು ಮಾಡಿರುವ ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠದಲ್ಲಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
ಅಕ್ಟೋಬರ್ ತಿಂಗಳ ಮೊದಲ ವಾರದಿಂದ ಈ ಅರ್ಜಿಗಳ ವಿಚಾರಣೆ ಆರಂಭಿಸಲಾಗುವುದು ಎಂದು ತಿಳಿಸಿರುವ ನ್ಯಾಯಾಲಯವು, ಈ ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ಜಮ್ಮು– ಕಾಶ್ಮೀರ ಆಡಳಿತಕ್ಕೆ ನೋಟಿಸ್ ಜಾರಿ ಮಾಡಿದೆ.
ಕಾಶ್ಮೀರದಲ್ಲಿ ದೂರವಾಣಿ ಹಾಗೂ ಇಂಟರ್‌ನೆಟ್ ಸೇವೆಗಳ ಮೇಲೆ ಹೇರಿರುವ ನಿರ್ಬಂಧವನ್ನು ಸಡಿಲಿಸಲು ಒತ್ತಾಯಿಸಿ ‘ಕಾಶ್ಮೀರ್ ಟೈಮ್ಸ್’ ಪತ್ರಿಕೆಯ ಸಂಪಾದಕಿ ಅನುರಾಧಾ ಭಾಸಿನ್ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಒಂದು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಕಾಶ್ಮೀರದಲ್ಲಿ ಬಂಧನಕ್ಕೆ ಒಳಗಾಗಿರುವ ತಮ್ಮ ಪಕ್ಷದ ಮುಖಂಡ, ಮಾಜಿ ಶಾಸಕ ಮೊಹಮ್ಮದ್ ಯೂಸುಫ್ ತಾರಿಗಾಮಿ ಅವರನ್ನು ಭೇಟಿಮಾಡಲು ಅವಕಾಶ ನೀಡಬೇಕು ಎಂದು ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಅವರು ಮಾಡಿರುವ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಅವರಿಗೆ ಕಾಶ್ಮೀರಕ್ಕೆ ಹೋಗಲು ಕೆಲವು ನಿಬಂಧನೆಗಳನ್ನು ವಿಧಿಸಿ ಅನುಮತಿ ನೀಡಿದೆ.
ವಿಶೇಷಾಧಿಕಾರ ರದ್ದತಿ ಪ್ರಶ್ನಿಸಿ, ಜಮ್ಮು ಕಾಶ್ಮೀರ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವಕೀಲರು ಸೇರಿದಂತೆ 12ಕ್ಕೂ ಹೆಚ್ಚು ಮಂದಿ ಸುಪ್ರೀಂ ಕೋರ್ಟ್‌ಗೆ ಅರ್ಜಿಗಳನ್ನು ಸಲ್ಲಿಸಿದ್ದರು.
ಸಚಿವರ ತಂಡ ರಚನೆ
ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ಅಭಿವೃದ್ಧಿ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳ ಅಧ್ಯಯನ ನಡೆಸಿ ಪರಿಹಾರ ಕಂಡುಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರವು ಬುಧವಾರ ಸಚಿವರ ತಂಡವೊಂದನ್ನು ರಚಿಸಿದೆ.
ಕಾನೂನು ಸಚಿವ ರವಿಶಂಕರ್ ಪ್ರಸಾದ್, ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ಸಚಿವ ತಾವರ್‌ಚಂದ್ ಗೆಹ್ಲೋಟ್, ಕೃಷಿ ಸಚಿವ ನರೇಂದ್ರಸಿಂಗ್ ತೋಮರ್, ಪ್ರಧಾನಿ ಕಚೇರಿ ಸಚಿವ ಜಿತೇಂದ್ರ ಸಿಂಗ್ ಹಾಗೂ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ತಂಡದ ಸದಸ್ಯರಾಗಿರುತ್ತಾರೆ. ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಜಮ್ಮು ಕಾಶ್ಮೀರ ಮರು ವಿಂಗಡಣಾ ಕಾಯ್ದೆ 2019ರ ಅಡಿ, ಅಕ್ಟೋಬರ್ 31ರಿಂದ ಅನ್ವಯವಾಗುವಂತೆ ವಿಭಜನೆಯು ಜಾರಿಗೆ ಬರಲಿದ್ದು, ಅದೇ ದಿನದಿಂದ ಈ ತಂಡವೂ ಅಸ್ತಿತ್ವಕ್ಕೆ ಬರಲಿದೆ.
ನಿರ್ಬಂಧ ಅಗತ್ಯ: ಮಲಿಕ್
ಶ್ರೀನಗರ ವರದಿ: ‘ಗಲಭೆಗಳು ನಡೆದು ಜನರಿಗೆ ಹಾನಿಯಾಗುವುದನ್ನು ತಡೆಯಲು ಜಮ್ಮು ಕಾಶ್ಮೀರದಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸುವುದು ಅಗತ್ಯ’ ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ವಾದಿಸಿದ್ದಾರೆ.
370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮೊದಲ ಬಾರಿಗೆ ಮಾಧ್ಯಮಗೋಷ್ಠಿ ನಡೆಸಿದ ಅವರು ಹೇಳಿದ್ದು...
* ಜಮ್ಮು ಕಾಶ್ಮೀರದ ಜನರ ಅಸ್ಮಿತೆ ಮತ್ತು ಸಂಸ್ಕೃತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ
* ರಾಷ್ಟ್ರವಿರೋಧಿ ಚಟುವಟಿಕೆ ನಡೆಸುವವರಿಗೆ ಇಂಟರ್‌ನೆಟ್ ಅನುಕೂಲಕರ ಸಾಧನವಾಗುವುದರಿಂದ ಸಂವಹನ ಮಾಧ್ಯಮಗಳ ಮೇಲಿನ ನಿರ್ಬಂಧವು ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯುವುದು
* ಕಾಶ್ಮೀರದಲ್ಲಿ ಪ್ರತಿಭಟನಕಾರರ ಮೇಲೆ ಪೆಲೆಟ್ ಗನ್ ಬಳಸಿದ್ದು ನಿಜ. ಆದರೆ ಜನರಿಗೆ ತೊಂದರೆಯಾಗದಂತೆ ಅತ್ಯಂತ ಎಚ್ಚರಿಕೆಯಿಂದ ಬಳಸಲಾಗಿದೆ
* ಮುಂದಿನ ಮೂರು ತಿಂಗಳಲ್ಲಿ ಜಮ್ಮು ಕಾಶ್ಮೀರದಲ್ಲಿ 50 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ
* ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಶೀಘ್ರದಲ್ಲೇ ದೊಡ್ಡ ಘೋಷಣೆಯೊಂದನ್ನು ಮಾಡಲಿದೆ
* ರಾಜಕೀಯ ನಾಯಕರನ್ನು ಬಂಧಿಸಿರುವುದಕ್ಕೆ ಬೇಸರಪಟ್ಟುಕೊಳ್ಳಬೇಡಿ. ಈ ಬಂಧನದಿಂದ ಅವರ ರಾಜಕೀಯ ಭವಿಷ್ಯ ಇನ್ನಷ್ಟು ಉತ್ತಮಗೊಳ್ಳಲಿದೆ
ವಾಯುಮಾರ್ಗ ಬಂದ್
ಇಸ್ಲಾಮಾಬಾದ್: ‘ಕರಾಚಿ ವಾಯುಪ್ರದೇಶದ ಮೂರು ಮಾರ್ಗಗಳಲ್ಲಿ ಆಗಸ್ಟ್ 31ರವರೆಗೆ ಭಾರತೀಯ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡುವುದಿಲ್ಲ’ ಎಂದು ಪಾಕಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರ ಬುಧವಾರ ಹೇಳಿದೆ. ಆದರೆ, ವಿಮಾನಗಳ ಹಾರಾಟಕ್ಕೆ ಪರ್ಯಾಯ ಮಾರ್ಗವನ್ನೂ ಸೂಚಿಸಿದೆ.
‘ಪಾಕಿಸ್ತಾನದ ವಾಯುಪ್ರದೇಶದಲ್ಲಿ ಭಾರತೀಯ ವಿಮಾನಗಳಿಗೆ ಸಂಪೂರ್ಣ ನಿಷೇಧ ಹೇರುವ ಬಗ್ಗೆ ಪ್ರಧಾನಿ ಇಮ್ರಾನ್ ಖಾನ್ ಅವರು ಚಿಂತನೆ ನಡೆಸುತ್ತಿದ್ದಾರೆ’ ಎಂದು ಪಾಕಿಸ್ತಾನದ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಅವರು ಮಂಗಳವಾರ ಟ್ವೀಟ್ ಮಾಡಿದ್ದರು. ಮಂಗಳವಾರ ನಡೆದ ಸಂಪಟ ಸಭೆಯಲ್ಲೂ ಈ ವಿಚಾರದ ಬಗ್ಗೆ ಚರ್ಚಿಸಲಾಗಿತ್ತು.
ವಿಶ್ವಸಂಸ್ಥೆಯಲ್ಲಿ ಚರ್ಚೆ: ‘ಮುಂದಿನ ತಿಂಗಳು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಮ್ರಾನ್ ಖಾನ್ ಅವರು ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಲಿದ್ದಾರೆ’ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮಹಮೂದ್ ಖುರೇಶಿ ಹೇಳಿದ್ದಾರೆ.
‘ಕೆಲವು ರಾಷ್ಟ್ರಗಳ ಮುಖ್ಯಸ್ಥರ ಜೊತೆಗೆ ಅವರು ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ’ ಎಂದು ಖುರೇಶಿ ಮಾಧ್ಯಮದವರೊಡನೆ ಮಾತನಾಡುತ್ತಾ ತಿಳಿಸಿದರು.
ಯೆಚೂರಿ ಇಂದು ಕಾಶ್ಮೀರಕ್ಕೆ
ಗುರುವಾರವೇ ಕಾಶ್ಮೀರಕ್ಕೆ ಹೋಗಿ ತಮ್ಮ ಪಕ್ಷದ ಮುಖಂಡ, ಮಾಜಿ ಸಚಿವ ಮೊಹಮ್ಮದ್ ಯೂಸುಫ್ ತಾರಿಗಾಮಿ ಅವರನ್ನು ಭೇಟಿಮಾಡುವುದಾಗಿ ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಹೇಳಿದ್ದಾರೆ.
ಯೆಚೂರಿ ಅವರು ಈ ಹಿಂದೆಯೂ ಎರಡು ಬಾರಿ ಕಾಶ್ಮೀರಕ್ಕೆ ಹೋಗಿದ್ದರು. ಆದರೆ ಅಧಿಕಾರಿಗಳು ಅವರನ್ನು ವಿಮಾನ ನಿಲ್ದಾಣದಲ್ಲೇ ತಡೆದು ಮರಳಿ ಕಳುಹಿಸಿದ್ದರು. ಇದನ್ನು ವಿರೋಧಿಸಿ ಯೆಚೂರಿ ಕೋರ್ಟ್ ಮೊರೆಹೋಗಿದ್ದರು. ಕಾಶ್ಮೀರಕ್ಕೆ ಹೋಗಲು ಅವರಿಗೆ ಅನುಮತಿ ನೀಡಿರುವ ಕೋರ್ಟ್, ‘ತಾರಿಗಾಮಿ ಅವರನ್ನು ಭೇಟಿ ಮಾಡುವಷ್ಟಕ್ಕೇ ಪ್ರವಾಸವನ್ನು ಸೀಮಿತಗೊಳಿಸಬೇಕು’ ಎಂದು ಸೂಚಿಸಿದೆ.
‘ನನ್ನ ಅರ್ಜಿಯ ವಿಚಾರಣೆಯು ಇಲ್ಲಿಗೇ ಮುಗಿಯುವುದಿಲ್ಲ. ತಾರಿಗಾಮಿ ಅವರನ್ನು ಭೇಟಿ ಮಾಡಿ ಬಂದ ಬಳಿಕ ಅವರ ಆರೋಗ್ಯದ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಕೋರ್ಟ್ ಸೂಚಿಸಿದೆ. ಕಾಶ್ಮೀರದಿಂದ ನಾನು ಮರಳಿದ ಬಳಿಕ ಪ್ರಕರಣ ಮತ್ತೆ ಮುಂದೆ ಸಾಗಲಿದೆ. ಇದು ಮಧ್ಯಂತರ ಆದೇಶ ಅಷ್ಟೇ’ ಎಂದು ಯೆಚೂರಿ ಹೇಳಿದ್ದಾರೆ.
ವಿದ್ಯಾರ್ಥಿಗೆ ಭದ್ರತೆ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿರುವ ಅನಂತನಾಗ್ ಜಿಲ್ಲೆಯ ವಿದ್ಯಾರ್ಥಿ ಮೊಹಮ್ಮದ್ ಅಲೀಂ ಸಯ್ಯದ್ ಅವರಿಗೆ ತಮ್ಮ ಹುಟ್ಟೂರಿಗೆ ಭೇಟಿನೀಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಅವರಿಗೆ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಸೂಚಿಸಿದೆ.
‘ಆಗಸ್ಟ್ 4–5ರ ನಂತರ ನನ್ನ ಪಾಲಕರನ್ನು ಕುರಿತ ಯಾವ ಮಾಹಿತಿಯೂ ನನಗೆ ಲಭ್ಯವಾಗುತ್ತಿಲ್ಲ. ಅವರನ್ನು ಭೇಟಿಮಾಡಿ ಬರಲು ನನಗೆ ಅನುಮತಿ ನೀಡಬೇಕು’ ಎಂದು ಅಲೀಂ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಪಾಲಕರನ್ನು ಭೇಟಿಮಾಡಿ ಬಂದ ಬಳಿಕ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸುವಂತೆ ಕೋರ್ಟ್ ವಿದ್ಯಾರ್ಥಿಗೆ ಸೂಚಿಸಿದೆ.
***
ಜಮ್ಮು–ಕಾಶ್ಮೀರ ಸ್ಥಿತಿಗತಿ
* ಕಾಶ್ಮೀರ ಕಣಿವೆಯಲ್ಲಿ ಬುಧವಾರದಿಂದ ಹಿರಿಯ ಪ್ರಾಥಮಿಕ ಶಾಲೆಗಳು ಆರಂಭವಾಗಿವೆ. ಆದರೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸಂಖ್ಯೆ ತೀರಾ ವಿರಳವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
* ಗುಜ್ಜರ್ ಸಮುದಾಯದ ಇಬ್ಬರು ವ್ಯಕ್ತಿಗಳನ್ನು ಭಯೋತ್ಪಾದಕರು ಅಪಹರಿಸಿ ಹತ್ಯೆ ಮಾಡಿರುವುದನ್ನು ಖಂಡಿಸಿ ಮಾಜಿ ಸಚಿವ ಅಬ್ದುಲ್ ಗನಿ ಕೊಹ್ಲಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷ ಗುಲಾಂ ಅಲಿ ಖತನಾ ಸೇರಿದಂತೆ ಅನೇಕ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿದರು.
* ದಕ್ಷಿಣ ಕಾಶ್ಮೀರದ ತ್ರಾಲ್ ಪ್ರದೇಶದಿಂದ ಗುಜ್ಜರ್ ಸಮುದಾಯದ ಅಬ್ದುಲ್ ಖಾದಿರ್ ಕೊಹ್ಲಿ ಹಾಗೂ ಅವರ ಮಲಸಹೋದರ ಮನ್ಜೂರ್ ಅಹ್ಮದ್ ಕೊಹ್ಲಿ ಅವರನ್ನು ಕೆಲವು ದಿನಗಳ ಹಿಂದೆ ಭಯೋತ್ಪಾದಕರು ಅಪಹರಿಸಿದ್ದರು. ಕಳೆದ ಸೋಮವಾರ ಮತ್ತು ಮಂಗಳವಾರದಂದು ಇವರ ಶವಗಳು ಪತ್ತೆಯಾಗಿದ್ದವು. ಇವರಿಬ್ಬರನ್ನೂ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.