ನವದೆಹಲಿ: ಅನುಕಂಪ ಆಧಾರಿತ ನೇಮಕಾತಿಯನ್ನು ಸರ್ಕಾರಿ ಉದ್ಯೋಗ ಪಡೆಯಲು ಸ್ಥಾಪಿತ ಹಕ್ಕು ಎಂದು ಪರಿಗಣಿಸುವಂತಿಲ್ಲ. ಅದು, ಸೇವೆಯಲ್ಲಿ ಇರುವಾಗಲೇ ಮೃತಪಡುವ ನೌಕರನೊಬ್ಬ ಹೊಂದಿರುವ ಸೇವಾ ಷರತ್ತು ಅಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
1997ರಲ್ಲಿ ನಿಧನರಾದ ಪೊಲೀಸ್ ಕಾನ್‌ಸ್ಟೆಬಲ್‌ವೊಬ್ಬರ ಪುತ್ರನಿಗೆ ಅನುಕಂಪ ಆಧಾರಿತ ಉದ್ಯೋಗ ನೀಡಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ, ಈ ಕುರಿತ ಅರ್ಜಿಯ ವಿಚಾರಣೆ ನಡೆಸಿತು.
‘ಸಂಬಂಧಪಟ್ಟ ನೀತಿಗೆ ವಿರುದ್ಧವಾಗಿ ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿಗೆ ಅನುಕೂಲವಾಗುವಂತೆ ಯಾವುದೇ ಕಾನೂನುಬಾಹಿರ ಕ್ರಮ ತೆಗೆದುಕೊಳ್ಳು ವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದೆ.
ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಯ ಮರಣದಿಂದ ಎದುರಾಗಬಹುದಾದ ತಕ್ಷಣದ ಆರ್ಥಿಕ ಸಂಕಷ್ಟವನ್ನು ಎದುರಿಸಲೆಂದು ಅನುಕಂಪ ಆಧಾರಿತ ನೇಮಕಾತಿ ಮಾಡಿಕೊಳ್ಳ ಲಾಗುತ್ತದೆ. ಆದರೆ ಇದನ್ನು ಸ್ಥಾಪಿತ ಹಕ್ಕು ಎಂದು ಪರಿ ಗಣಿಸುವಂತಿಲ್ಲ. ಅಲ್ಲದೇ, ಸಾಕಷ್ಟು ಸಮಯ ಕಳೆದ ನಂತರ ಉದ್ಯೋಗ ಪಡೆ ಯುವುದಕ್ಕಾಗಿ ವ್ಯಕ್ತಿ ಹೊಂದಿರುವ ಹಕ್ಕು ಕೂಡ ಇದಲ್ಲ’ ಎಂದೂ ಪೀಠ ಹೇಳಿತು.
ಏನಿದು ಪ್ರಕರಣ?: ಅರ್ಜಿದಾರ ಟಿಂಕು ಅವರ ತಂದೆ ಕಾನ್‌ಸ್ಟೆಬಲ್ ಜೈ ಪ್ರಕಾಶ್ ಅವರು ಸೇವೆಯಲ್ಲಿದ್ದಾಗ 1997ರಲ್ಲಿ ನಿಧನರಾದರು. ಆ ಸಮಯದಲ್ಲಿ ಟಿಂಕು ಏಳು ವರ್ಷದ ಬಾಲಕ. ಜೈ ಪ್ರಕಾಶ್ ಅವರ ಪತ್ನಿ ಅನಕ್ಷರಸ್ಥರಾಗಿದ್ದು, ಅನುಕುಂಪ ಆಧಾರಿತ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿರಲಿಲ್ಲ.
ಬದಲಿಗೆ ಅವರು ತನ್ನ ಅಪ್ರಾಪ್ತ ವಯಸ್ಸಿನ ಮಗನ ಹೆಸರನ್ನು ‘ಮೈನರ್ಸ್ ರಿಜಿಸ್ಟರ್’ನಲ್ಲಿ ಸೇರಿಸುವಂತೆ ಕೋರಿದ್ದರು. ಮಗ ಪ್ರಾಪ್ತ ವಯಸ್ಸಿಗೆ ಬಂದಾಗ ಆತನಿಗೆ ಉದ್ಯೋಗ ದೊರೆಯಲಿ ಎಂಬುದು ಅವರ ಉದ್ದೇಶವಾಗಿತ್ತು.
1998ರಲ್ಲಿ ಹರಿಯಾಣ ಪೊಲೀಸ್ ಮಹಾ ನಿರ್ದೇಶಕರು ಟಿಂಕು ಹೆಸರನ್ನು ದಾಖಲಿಸಲು ಸೂಚನೆ ನೀಡಿದ್ದರು. ಇದು ಭವಿಷ್ಯದಲ್ಲಿ ಉದ್ಯೋಗ ದೊರೆಯುವ ಸಾಧ್ಯತೆಯನ್ನು ಸೂಚಿಸುತ್ತದೆ. ಟಿಂಕು ಪ್ರಾಪ್ತ ವಯಸ್ಸಿಗೆ ಬಂದ ಬಳಿಕ, 2008ರಲ್ಲಿ ಅನುಕಂಪ ಆಧಾರಿತ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದರು. ಆ ವೇಳೆಗೆ ಅವರ ತಂದೆ ಮೃತಪಟ್ಟು 11 ವರ್ಷಗಳಾಗಿದ್ದವು.
ಉದ್ಯೋಗಿಯ ಮರಣದ ಬಳಿಕ ಅನುಕಂಪ ಆಧಾರಿತ ಉದ್ಯೋಗ ಪಡೆಯಲು ಮೂರು ವರ್ಷಗಳ ಕಾಲ ಮಿತಿಯನ್ನು 1999ರಲ್ಲಿ ನಿಗದಿಪಡಿಸ ಲಾಗಿದೆ ಎಂದು ಹೇಳುವ ಮೂಲಕ ಹರಿಯಾಣದ ಸಕ್ಷಮ ಪ್ರಾಧಿಕಾರ, ಟಿಂಕು ಅವರ ಅರ್ಜಿಯನ್ನು ತಿರಸ್ಕರಿಸಿತ್ತು.
ಪ್ರಾಧಿಕಾರದ ಆದೇಶ ಪ್ರಶ್ನಿಸಿ ಟಿಂಕು ಸಲ್ಲಿಸಿದ್ದ ಅರ್ಜಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ, ಟಿಂಕು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರಾಧಿಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ.
ಅವಕಾಶ: ಅರ್ಜಿದಾರರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಸೂಚಿಸಿದ ಸುಪ್ರೀಂ ಕೋರ್ಟ್, ಆರು ವಾರಗಳಲ್ಲಿ ಪರಿಹಾರ ನೀಡುವಂತೆ ಸೂಚಿಸಿದೆ. ಪರಿಹಾರ ನೀಡುವುದು ವಿಳಂಬವಾದರೆ, ಅರ್ಜಿ ಸಲ್ಲಿಸಿದ ದಿನದಿಂದ ಬಡ್ಡಿ ಅನ್ವಯವಾಗುತ್ತದೆ ಎಂದು ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.