ನವದೆಹಲಿ: ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಬಗ್ಗೆ ಟ್ವಿಟರ್‌ನಲ್ಲಿ ಮಾಡಿದ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ನಟಿ ಸ್ವರಾ ಭಾಸ್ಕರ್ ಹಾಗೂ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಮತ್ತು ಇತರರ ವಿರುದ್ಧ ದೆಹಲಿ ಪೊಲೀಸರಿಗೆ ದೂರು ನೀಡಲಾಗಿದೆ.
ತಿಲಕ್ ಮಾರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದರೂ ಇಲ್ಲಿಯವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.
ಕೋಮು ಸಂಘರ್ಷ ಪ್ರಚೋದಿಸುವ ಉದ್ದೇಶದಿಂದ ಅಬ್ದುಲ್ ಸಮದ್ ಅವರ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ ಎಂದು ಆರೋಪಿಸಿ ಉತ್ತರ ಪ್ರದೇಶ ಪೊಲೀಸರು ಟ್ವಿಟರ್, ದಿ ವೈರ್, ಪತ್ರಕರ್ತರು ಮತ್ತು ಕಾಂಗ್ರೆಸ್ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಬೆನ್ನಲ್ಲೇ ಈ ದೂರು ದಾಖಲಾಗಿದೆ.
ಜೂನ್ 7ರಂದು ದಾಖಲಾದ ಎಫ್‌ಐಆರ್ ಪ್ರಕಾರ, ಜೈ ಶ್ರೀರಾಮ್ ಎಂದು ಘೋಷಣೆ ಕೂಗಲು ಅಥವಾ ಗಡ್ಡವನ್ನು ಕತ್ತರಿಸಲು ತನಗೆ ಒತ್ತಾಯಪಡಿಸಿಲ್ಲ ಎಂದು ವೃದ್ಧ ಹೇಳಿದ್ಧಾರೆ ಎಂದು ಗಾಜಿಯಾಬಾದ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಪಾಠಕ್ ಹೇಳಿದ್ದಾರೆ.
ಎಸ್‌ಪಿ ಕಾರ್ಯಕರ್ತರ ವಿರುದ್ಧ ಪ್ರಕರಣ
ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆಕೆಲವು ಯುವಕರು ಹಲ್ಲೆ ನಡೆಸಿದ ವಿಡಿಯೊ ಪ್ರಸರಣ ಸಂಬಂಧ ಗಾಜಿಯಾಬಾದ್ ಪೊಲೀಸರು ಸಮಾಜವಾದಿ ಪಕ್ಷದ ಕಾರ್ಯಕರ್ತರೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದಾರಿತಪ್ಪಿಸುವ ಈ ವಿಡಿಯೊದ ಸತ್ಯಾಸತ್ಯತೆ ಪರಿಶೀಲಿಸಲು ಪ್ರಯತ್ನಿಸದೇ ಫೇಸ್‌ಬುಕ್ ಸಂಸ್ಥೆಯು ಅದನ್ನು ಪ್ರಸಾರ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಫೇಸ್‌ಬುಕ್ ಅನ್ನು ಈ ಪ್ರಕರಣದಲ್ಲಿ ಆರೋಪಿ ಎಂದು ಉಲ್ಲೇಖಿಸಿಲ್ಲ.
ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವ ಮೂಲಕ ಅದಕ್ಕೆ ಕೋಮು ಬಣ್ಣ ನೀಡಲು ಯತ್ನಿಸಿದ ಆರೋಪದ ಮೇಲೆ ಉಮೈದ್ ಪೆಹೆಲ್ವಾನ್ ವಿರುದ್ಧ ದ್ವೇಷ ಹುಟ್ಟುಹಾಕಿದ ಮತ್ತು ಶಾಂತಿ ಕದಡಿದ ಆರೋಪ ಹೊರಿಸಲಾಗಿದೆ ಎಂದು ಎಫ್ಐಆರ್ ಉಲ್ಲೇಖಿಸಿದೆ.
ಎಸ್‌ಪಿ ಸರ್ಕಾರದ ಅವಧಿಯಲ್ಲಿ ಉಮೈದ್ ಅವರು ಗಾಜಿಯಾಬಾದ್ ಅಭಿವೃದ್ಧಿ ಪ್ರಾಧಿಕಾರದ (ಜಿಡಿಎ) ಸದಸ್ಯರಾಗಿದ್ದರು. ಈಗಲೂ ಅವರು ಪಕ್ಷದ ಕಾರ್ಯಕರ್ತರಾಗಿದ್ದಾರೆ ಎಂದು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಟ್ವಿಟರ್, ಸುದ್ದಿ ವೆಬ್‌ಸೈಟ್, ಕೆಲವು ಪತ್ರಕರ್ತರು ಮತ್ತು ಕಾಂಗ್ರೆಸ್ ಮುಖಂಡರ ವಿರುದ್ಧಗಾಜಿಯಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ ಮರುದಿನ ಲೋನಿ ಬಾರ್ಡರ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.