ವಾರಾಣಸಿ (ಉತ್ತರ ಪ್ರದೇಶ): ಆರ್‌ಎಸ್‌ಎಸ್ ಮಾಜಿ ಮುಖ್ಯಸ್ಥ ಎಂ.ಎಸ್. ಗೋಲ್ವಾಲ್ಕರ್ ಅವರ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದ ಆರೋಪದ ಮೇಲೆ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಸಂಸದ-ಶಾಸಕರ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.
ಕಾಶಿಯ ಬಿಜೆಪಿ ಕಾನೂನು ಘಟಕದ ಸಂಚಾಲಕರೂ ಆಗಿರುವ ವಕೀಲ ಶಶಾಂಕ್ ಶೇಖರ್ ತ್ರಿಪಾಠಿ ಅವರು ದೂರು ದಾಖಲಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಶನಿವಾರ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ನ್ಯಾಯಾಲಯವು ಹೇಳಿಕೆ ಮತ್ತು ಸಾಕ್ಷ್ಯವನ್ನು ದಾಖಲಿಸಲು ಜುಲೈ 18ಕ್ಕೆ ಸಮಯ ನಿಗದಿಪಡಿಸಿದೆ ಎಂದು ಅವರು ಹೇಳಿದ್ದಾರೆ.
ಅಧಿಕೃತ ಟ್ವಿಟರ್ ಖಾತೆಯ ಮೂಲಕ ದಿಗ್ವಿಜಯ್ ಸಿಂಗ್ ಸಾಮಾಜಿಕ ದ್ವೇಷವನ್ನು ಉಂಟುಮಾಡುವ, ಗೋಲ್ವಾಲ್ಕರ್ ಅವರ ಬಗ್ಗೆ ಸುಳ್ಳು ಸುದ್ದಿ ಮತ್ತು ತಿರುಚಿದ ಚಿತ್ರಗಳನ್ನು ಪ್ರಕಟಿಸುವ ಮೂಲಕ ಆರ್‌ಎಸ್‌ಎಸ್‌ನ ಘನತೆಗೆ ಕಳಂಕ ತಂದಿದ್ದಾರೆ ಎಂದು ತ್ರಿಪಾಠಿ ಆರೋಪಿಸಿದ್ದಾರೆ.
ಸಮಾಜದಲ್ಲಿ ದ್ವೇಷವನ್ನು ಹುಟ್ಟುಹಾಕುವ ಮತ್ತು ಆರ್‌ಎಸ್‌ಎಸ್‌ಗೆ ಕಳಂಕ ತರುವ ಉದ್ದೇಶದಿಂದ ಸಿಂಗ್ ಅವರು ಉದ್ದೇಶಪೂರ್ವಕವಾಗಿ ಇಂತಹ ಸುಳ್ಳು ಸಂಗತಿಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.