ನವದೆಹಲಿ: ಮಾಲಿನ್ಯ ಸೃಷ್ಟಿಗೆ ಕಾರಣವಾಗುವ ಯಾವುದೇ ಚಟುವಟಿಕೆಯನ್ನು ಯಾವ ಧರ್ಮವೂ ಉತ್ತೇಜಿಸುವುದಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, ದೆಹಲಿಯಲ್ಲಿ ಪಟಾಕಿ ನಿಷೇಧವನ್ನು ವರ್ಷವಿಡೀ ಮುಂದುವರಿಸುವ ಬಗ್ಗೆ ಹದಿನೈದು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ದೆಹಲಿ ಸರ್ಕಾರಕ್ಕೆ ಸೋಮವಾರ ಸೂಚನೆ ನೀಡಿದೆ.
ಮಾಲಿನ್ಯದಿಂದ ಮುಕ್ತವಾದ ವಾತಾವರಣದಲ್ಲಿ ಜೀವಿಸುವುದು ಪ್ರತಿ ನಾಗರಿಕನ ಮೂಲಭೂತ ಹಕ್ಕು, ಇದನ್ನು ಸಂವಿಧಾನದ 21ನೆಯ ವಿಧಿಯು ಖಾತರಿಪಡಿಸಿದೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಅಗಸ್ಟೀನ್ ಜಾರ್ಜ್ ಮಸೀಹ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.
ಪಟಾಕಿಗಳ ತಯಾರಿಕೆ, ಮಾರಾಟ, ದಾಸ್ತಾನು ಮತ್ತು ಅವುಗಳನ್ನು ಸಿಡಿಸುವುದರ ಮೇಲೆ ನಿಷೇಧ ಹೇರುವ ಬಗ್ಗೆ ದೆಹಲಿಗೆ ಹೊಂದಿಕೊಂಡಿರುವ ರಾಜ್ಯ ಸರ್ಕಾರಗಳು ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಪೀಠವು ಸೂಚನೆ ನೀಡಿದೆ.
ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಪಟಾಕಿ ಸಿಡಿಸುವುದರ ಮೇಲಿನ ನಿಷೇಧವನ್ನು ಪೂರ್ತಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾದ ದೆಹಲಿ ಪೊಲೀಸರನ್ನು ಪೀಠವು ವಿಚಾರಣೆಯ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡಿತು. ದೆಹಲಿ ಪೊಲೀಸರ ಕ್ರಮವು ‘ಕಣ್ಣೊರೆಸುವ ತಂತ್ರವಷ್ಟೇ’ ಎಂದು ಅಸಮಾಧಾನ ವ್ಯಕ್ತಪಡಿಸಿತು.
‘ದೆಹಲಿ ಪೊಲೀಸರು ನಿಷೇಧ ಆಜ್ಞೆಯನ್ನು ಅನುಷ್ಠಾನಕ್ಕೆ ತರುವುದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪಟಾಕಿಗಳನ್ನು ತಯಾರಿಸುವವರಿಗೆ, ದಾಸ್ತಾನು ಮಾಡುವವರಿಗೆ ಹಾಗೂ ಮಾರಾಟ ಮಾಡುವವರಿಗೆ ನಿಷೇಧದ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂಬುದನ್ನು ಹೇಳುವ ಯಾವ ಅಂಶವೂ ಪ್ರಮಾಣಪತ್ರದಲ್ಲಿ ಇಲ್ಲ. ಪಟಾಕಿ ಮಾರಾಟ ಮಾಡುವುದನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ಪರವಾನಗಿ ಹೊಂದಿದವರಿಗೆ ಹೇಳುವ ಕೆಲಸವನ್ನು ಪೊಲೀಸರು ಮೊದಲು ಮಾಡಬೇಕಿತ್ತು’ ಎಂದು ನ್ಯಾಯಪೀಠವು ಹೇಳಿದೆ.
ನಿಷೇಧದ ಬಗ್ಗೆ ಸಂಬಂಧಪಟ್ಟ ಎಲ್ಲರಿಗೂ ತಕ್ಷಣವೇ ಮಾಹಿತಿ ನೀಡಬೇಕು, ಪಟಾಕಿಗಳನ್ನು ಆನ್‌ಲೈನ್ ವೇದಿಕೆಗಳ ಮೂಲಕ ಮಾರಾಟ ಮಾಡುವುದನ್ನು, ಅವುಗಳನ್ನು ಗ್ರಾಹಕರಿಗೆ ತಲುಪಿಸುವುದನ್ನು ನಿಲ್ಲಿಸಬೇಕು ಎಂದು ಪೀಠವು ದೆಹಲಿ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ.
ಎಎಪಿ ನೇತೃತ್ವದ ದೆಹಲಿ ಸರ್ಕಾರವು ಪಟಾಕಿ ನಿಷೇಧಿಸುವ ಆದೇಶವನ್ನು ಅಕ್ಟೋಬರ್ 14ರಂದು ಹೊರಡಿಸಿತು. ಇದು ದಸರಾ ಹಬ್ಬ ಆರಂಭವಾಗುವ ಎರಡು ದಿನ ಮೊದಲು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಹೇಳಿದರು.
‘ಸಂವಿಧಾನದ 21ನೆಯ ವಿಧಿಯ ಅಡಿಯಲ್ಲಿ ತಮಗೆ ಪಟಾಕಿ ಸಿಡಿಸುವ ಹಕ್ಕು ಇದೆ ಎಂದು ಯಾರಾದರೂ ಪ್ರತಿಪಾದಿಸುತ್ತಿದ್ದರೆ ಅವರು ತನ್ನೆದುರು ಹಾಜರಾಗಬಹುದು’ ಎಂದು ಪೀಠವು ವಿಚಾರಣೆ ಸಂದರ್ಭದಲ್ಲಿ ಮೌಖಿಕವಾಗಿ ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.