ADVERTISEMENT

ಸಂತ್ರಸ್ತೆ ದೇಹ ಸುಟ್ಟು ಕರಕಲು: ಅತ್ಯಾಚಾರ ಆರೋಪ ಸಾಬೀತಿಗೆ ಮಾದರಿ ಸಂಗ್ರಹ ಅಸಾಧ್ಯ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 23:30 IST
Last Updated 13 ನವೆಂಬರ್ 2024, 23:30 IST
-
-   

ಗುವಾಹಟಿ: ಮಣಿಪುರದಲ್ಲಿ ನ.7ರಂದು ಹತ್ಯೆಯಾದ ಹಮರ್ ಸಮುದಾಯದ ಮಹಿಳೆಯ ದೇಹವು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಗುರುತಿಸಲಾಗದ ಸ್ಥಿತಿಯಲ್ಲಿದೆ. ಹೀಗಾಗಿ, ಮಹಿಳೆಯ ದೇಹದ ಮಾದರಿಗಳನ್ನು ಸಂಗ್ರಹಿಸಲು ಅಸ್ಸಾಂನ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಎಸ್‌ಎಂಸಿಎಚ್‌) ವೈದ್ಯರಿಗೆ ಸಾಧ್ಯವಾಗಿಲ್ಲ.

‘ನನ್ನ ಪತ್ನಿ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಕೊಲೆ ಮಾಡಲಾಗಿದೆ’ ಎಂದು ಹತ್ಯೆಯಾದ ಮಹಿಳೆಯ ಪತಿ ಹೇಳಿಕೊಂಡಿದ್ದಾರೆ. ಮಹಿಳೆಯ ದೇಹ ಸಂಪೂರ್ಣ ಸುಟ್ಟಿರುವ ಕಾರಣ ಮಾದರಿಗಳ ಸಂಗ್ರಹ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪತಿಯ ಆರೋಪಗಳನ್ನು ಸಾಬೀತುಪಡಿಸುವುದು ಸವಾಲಾಗಿದೆ.

‘ಮಹಿಳೆಯ ದೇಹ ಸುಟ್ಟು ಕರಕಲಾಗಿರುವುದರಿಂದ, ದೇಹದಲ್ಲಿ ವೀರ್ಯ ಇರುವುದನ್ನು ಪತ್ತೆ ಮಾಡುವ ಪರೀಕ್ಷೆ ನಡೆಸುವುದು ಕಷ್ಟ. ರಾಸಾಯನಿಕ ಪರೀಕ್ಷೆಗಾಗಿ ಕರುಳುಗಳ ಮಾದರಿ ಸಂಗ್ರಹವೂ ಸಾಧ್ಯವಾಗುತ್ತಿಲ್ಲ’ ಎಂದು ಎಸ್‌ಎಂಸಿಎಚ್‌ನ ವಿಧಿವಿಜ್ಞಾನ ವಿಭಾಗದ ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಸುಟ್ಟು ಕರಕಲಾದ ಸ್ಥಿತಿಯಲ್ಲಿದ್ದ 31 ವರ್ಷದ ಹಮರ್ ಮಹಿಳೆ ದೇಹದ ಭಾಗಗಳನ್ನು ಆಕೆಯ ಮನೆಯಿಂದ ವಶಪಡಿಸಿಕೊಳ್ಳಲಾಗಿತ್ತು. ಅರಂಬಾಯ್ ಟೆಂಗೋಲ್‌ ಎಂಬ ಸಂಘಟನೆಯ ಸಶಸ್ತ್ರ ಜನರಿದ್ದ ಗುಂಪೊಂದು ಆಕೆಗೆ ಬೆಂಕಿ ಹಚ್ಚಿ, ಹತ್ಯೆ ಮಾಡಿತ್ತು ಎಂದು ಆರೋಪಿಸಲಾಗಿದೆ.

ಘಟನೆ ನಂತರ ಸಂಘಟನೆ ವಿರುದ್ಧ ಮಹಿಳೆಯ ಪತಿ ದೂರು ನೀಡಿದ್ದರು. ‘ಅರಂಬಾಯ್ ಟೆಂಗೋಲ್‌ ಸದಸ್ಯರು ಪತ್ನಿಯ ಮೇಲೆ ಅತ್ಯಾಚಾರ ಎಸಗಿ, ಆಕೆಗೆ ಗುಂಡು ಹೊಡೆದು, ನಂತರ ಜೀವಂತ ದಹನ ಮಾಡಿದ್ದಾರೆ’ ಎಂದು ದೂರಿನಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.