ಮುಂಬೈ: ಮಹಾರಾಷ್ಟ್ರ ರಾಜಕೀಯವು 2019ರ ಬಳಿಕ ಗಮನಾರ್ಹ ಬದಲಾವಣೆಗಳನ್ನು ಕಂಡಿದ್ದು, ನಾಲ್ಕು ಪಕ್ಷಗಳ ಎರಡು ಸರಳ ಮೈತ್ರಿಯು, ಆರು ಪಕ್ಷಗಳ ಸಂಕೀರ್ಣ ಮೈತ್ರಿಯಾಗಿ ಪರಿವರ್ತನೆಯಾಗಿದೆ.
ಇದರ ಪರಿಣಾಮ, ಬಿಜೆಪಿ ನೇತೃತ್ವದ ‘ಮಹಾಯುತಿ’ (ಎನ್‌ಡಿಎ) ಮತ್ತು ಕಾಂಗ್ರೆಸ್ ನೇತೃತ್ವದ ‘ಮಹಾ ವಿಕಾಸ್ ಅಘಾಡಿ’ (ಇಂಡಿಯಾ) ಮೈತ್ರಿಯಲ್ಲಿ ಸೀಟು ಹಂಚಿಕೆ ದೀರ್ಘಾವಧಿಯ ಸಮಸ್ಯೆಯಾಗಿ ಬೆಳೆದಿದೆ.
ಚುನಾವಣಾ ಆಯೋಗವು ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಮಂಗಳವಾರ ಚುನಾವಣಾ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಎರಡೂ ಮೈತ್ರಿ ಕೂಟಗಳಲ್ಲಿ ಸೀಟು ಹಂಚಿಕೆ ಕುರಿತು ಅಂತಿಮ ಹಂತದ ಮಾತುಕತೆಗಳು ನಡೆಯುತ್ತಿವೆ.
1990ರಲ್ಲಿ ದಿವಂಗತ ಬಾಳಾಸಾಹೇಬ್ ಠಾಕ್ರೆ ನೇತೃತ್ವದಲ್ಲಿ ಅವಿಭಜಿತ ಶಿವಸೇನಾ ಮತ್ತು ಪ್ರಮೋದ್ ಮಹಾಜನ್, ಗೋಪಿನಾಥ್ ಮುಂಡೆ ನೇತೃತ್ವದ ಬಿಜೆಪಿ ಒಗ್ಗೂಡಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. 1999ರ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್‌ಸಿಪಿ ಪಕ್ಷಗಳು ಒಗ್ಗೂಡಿದ್ದವು.
ಆದರೆ, 2014ರಲ್ಲಿ ಶಿವಸೇನಾ– ಬಿಜೆಪಿ ಹಾಗೂ ಕಾಂಗ್ರೆಸ್– ಎನ್‌ಸಿಪಿ ಮೈತ್ರಿಗಳು ಮುರಿದುಬಿದ್ದವು. ಅವು ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದವು.
2022ರ ಜೂನ್– ಜುಲೈನಲ್ಲಿ ಶಿವಸೇನಾ ಅಧ್ಯಕ್ಷ ಮತ್ತು ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಏಕನಾಥ ಶಿಂದೆ ಬಂಡಾಯವೆದ್ದರು. ಇದರ ಪರಿಣಾಮ ಎವಿಎ ಸರ್ಕಾರ ಪತನವಾಯಿತು. ಬಳಿಕ ಶಿಂದೆ ಅವರು ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದರು. ಇದೀಗ ಶಿಂದೆ ನೇತೃತ್ವದ ಶಿವಸೇನಾ ಪಕ್ಷವೇ ‘ಬಿಲ್ಲು ಮತ್ತು ಬಾಣ’ದ ಚಿಹ್ನೆಯನ್ನು ಹೊಂದಿದೆ. ಉದ್ಧವ್ ಠಾಕ್ರೆ ಅವರು ಶಿವಸೇನಾ (ಯುಬಿಟಿ) ಬಣದ ಮುಖ್ಯಸ್ಥರಾಗಿದ್ದು ‘ಪಂಜು’ ಚಿಹ್ನೆ ಹೊಂದಿದ್ದಾರೆ.
2023ರ ಜೂನ್–ಜುಲೈನಲ್ಲಿ ಅಜಿತ್ ಪವಾರ್ ಅವರು ತಮ್ಮ ಚಿಕ್ಕಪ್ಪ ಶರದ್ ಪವಾರ್ ವಿರುದ್ಧ ಬಂಡಾಯವೆದ್ದು ‘ಮಹಾಯುತಿ’ ಸರ್ಕಾರದ ಜತೆ ಸೇರಿ ಉಪ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರು. ಇದೀಗ ಅಜಿತ್ ಪವಾರ್ ಅವರ ನೇತೃತ್ವದ ಎನ್‌ಸಿಪಿ ಬಣವು ‘ಗಡಿಯಾರ’ ಚಿಹ್ನೆಯನ್ನು ಹೊಂದಿದ್ದರೆ, ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ‘ಕಹಳೆ ಊದುತ್ತಿರುವ ಮನುಷ್ಯ’ನ ಚಿಹ್ನೆಯನ್ನು ಹೊಂದಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಎಂವಿಎ ಮೈತ್ರಿಯು 30 ಮತ್ತು ‘ಮಹಾಯುತಿ’ ಮೈತ್ರಿಯು 17 ಕ್ಷೇತ್ರಗಳಲ್ಲಿ ಜಯಗಳಿಸಿದವು. ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಗೆಲುವಿನ ನಗೆಬೀರಿದ್ದು, ಅವರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ.
‘ಶಿಂದೆ ‘ತ್ಯಾಗ’ಕ್ಕೆ ಸಿದ್ಧರಿರಬೇಕು’
ಮೈತ್ರಿಯನ್ನು ಅಖಂಡವಾಗಿಡಲು ಬಿಜೆಪಿ ಮಾಡಿದಂತೆ, ವಿಧಾನಸಭಾ ಚುನಾವಣಾ ಸೀಟು ಹಂಚಿಕೆ ವಿಷಯದಲ್ಲಿ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ‘ತ್ಯಾಗ’ ಮಾಡಲು ಸಿದ್ಧರಿರಬೇಕು ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಹೇಳಿದ್ದಾರೆ.
‘ಶಿಂದೆ ಅವರು ಮುಕ್ತ ಮನಸ್ಸಿನಿಂದ ಇರಬೇಕು ಮತ್ತು ತ್ಯಾಗ ಮಾಡಲು ಸಿದ್ಧರಾಗಿರಬೇಕು. ನಾವು ಸಹ ಮೈತ್ರಿಯನ್ನು ಎತ್ತಿಹಿಡಿಯಲು ತ್ಯಾಗ ಮಾಡಿದ್ದೇವೆ’ ಎಂದ ಅವರು, ‘ಬಿಜೆಪಿಯು ಹಿಂದೆ ಹೊಂದಿದ್ದ ಸ್ಥಾನಗಳಲ್ಲಿ ಸ್ಪರ್ಧಿಸುವ ಗುರಿಯನ್ನು ಹೊಂದಿದೆ’ ಎಂದು ನಾಗಪುರದಲ್ಲಿ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಜಾರಂಗೆ ಬೆಂಬಲ ಪಡೆಯಲು ನಾಯಕರ ಕಾತುರ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ, ಮರಾಠ ಮೀಸಲು ಹೋರಾಟಗಾರ ಮನೋಜ್ ಜಾರಂಗೆ ಅವರನ್ನು ಭೇಟಿ ಮಾಡಲು ವಿವಿಧ ಪಕ್ಷಗಳ ನಾಯಕರು ಮುಗಿಬೀಳುತ್ತಿದ್ದಾರೆ.
ಕಳೆದ ವರ್ಷದವರೆಗೆ ಅಷ್ಟಾಗಿ ತಿಳಿದಿಲ್ಲದ ಜಾರಂಗೆ, ಮೀಸಲು ಕೋಟಾಕ್ಕಾಗಿ ಆಗ್ರಹಿಸಿ ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಆಂದೋಲನ ಆರಂಭಿಸಿದರು. ಅವರು ಮರಾಠವಾಡ ಪ್ರದೇಶದ ಜಲ್ನಾ ಜಿಲ್ಲೆಯ ಅಂತರವಾಲಿ ಸಾರತಿ ಗ್ರಾಮದಲ್ಲಿ ಕನಿಷ್ಠ ಅರ್ಧ ಡಜನ್‌ಗೂ ಹೆಚ್ಚು ಉಪವಾಸ ನಿರಶನ ನಡೆಸುವ ಮೂಲಕ ಜನಪ್ರಿಯ ವ್ಯಕ್ತಿಯಾಗಿ ರೂಪುಗೊಂಡಿದ್ದಾರೆ.
ಮರಾಠ ಮೀಸಲು ಹೋರಾಟವು ಲೋಕಸಭಾ ಚುನಾವಣೆಯಲ್ಲಿ ‘ಮಹಾಯುತಿ’ ಮೈತ್ರಿಗೆ ಭಾರಿ ಪೆಟ್ಟು ನೀಡಿತ್ತು. ಸರ್ಕಾರವು ಮರಾಠ ಸಮುದಾಯದ ಬೇಡಿಕೆಗಳನ್ನು ಈಡೇರಿಸಬೇಕು ಅಥವಾ ವಿಧಾನಸಭಾ ಚುನಾವಣೆಯಲ್ಲಿ ಅದರ ಪರಿಣಾಮಗಳನ್ನು ಎದುರಿಸಬೇಕು ಎಂದು ಜಾರಂಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ವಿರುದ್ಧ ಜಾರಂಗೆ ತೀವ್ರ ವಾಗ್ದಾಳಿ ನಡೆಸಿದ ಬಳಿಕವೂ, ವಿವಿಧ ರಾಜಕೀಯ ಪಕ್ಷಗಳ ಹಲವು ನಾಯಕರು, ಚುನಾವಣಾ ಆಕಾಂಕ್ಷಿಗಳು ಕೆಲ ದಿನಗಳಿಂದ ಅವರನ್ನು ಭೇಟಿ ಮಾಡಿ, ಬೆಂಬಲ ಪಡೆಯಲು ಯತ್ನಿಸುತ್ತಿದ್ದಾರೆ.
ಬಿಜೆಪಿ– ಶಿವಸೇನಾ ಮೈತ್ರಿಯಲ್ಲಿ ಸೀಟು ಹಂಚಿಕೆ ವಿವರ
1990: ಮೊದಲ ಬಾರಿಗೆ ಬಿಜೆಪಿ ಮತ್ತು ಶಿವಸೇನಾ ಒಗ್ಗೂಡಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. 183 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಸೇನಾ 52 ಕ್ಷೇತ್ರಗಳಲ್ಲಿ ಗೆದ್ದಿತ್ತು. 105 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 42ರಲ್ಲಿ ಗೆದ್ದಿತ್ತು.
1995: ಹಿಂದಿನ ಸೀಟು ಹಂಚಿಕೆಯೇ ಮುಂದುವರಿಯಿತು. ಈ ಬಾರಿ ಶಿವಸೇನಾ 73ರಲ್ಲಿ ಮತ್ತು ಬಿಜೆಪಿ 65ರಲ್ಲಿ ಗೆಲುವಿನ ನಗೆ ಬೀರಿತು. ಸೇನಾ ಮತ್ತು ಬಿಜೆಪಿ ಮೈತ್ರಿಯು 1995–99ರವರೆಗೆ ಸರ್ಕಾರ ನಡೆಸಿತು.
1999: ಶಿವಸೇನಾ 171ರಲ್ಲಿ ಸ್ಪರ್ಧಿಸಿ 69ರಲ್ಲಿ ಗೆಲುವು ಪಡೆಯಿತು. 117 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 56ರಲ್ಲಿ ಜಯ ಪಡೆಯಿತು.
2004: ಹಿಂದಿನ ಸೀಟು ಹಂಚಿಕೆ ಸೂತ್ರವೇ ಮುಂದುವರಿಯಿತು. ಶಿವಸೇನಾ 62ರಲ್ಲಿ ಬಿಜೆಪಿ 54ರಲ್ಲಿ ವಿಜಯ ಸಾಧಿಸಿತು.
2009: ಸೀಟು ಹಂಚಿಕೆ ಸೂತ್ರದಲ್ಲಿ ಬದಲಾವಣೆಯಾಯಿತು. 169 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಸೇನಾ 44ರಲ್ಲಿ ಗೆದ್ದರೆ 119 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 46ರಲ್ಲಿ ಗೆಲುವು ಪಡೆಯಿತು. ಇದೇ ಮೊದಲ ಬಾರಿಗೆ ಬಿಜೆಪಿಯು ಶಿವಸೇನಾಗಿಂತ ಹೆಚ್ಚು ಸೀಟುಗಳನ್ನು ಪಡೆಯಿತು.
2014: ಮೈತ್ರಿ ಮುರಿದು ಬಿದ್ದಿತು. ಬಿಜೆಪಿ 122 ಮತ್ತು ಸೇನಾ 63ರಲ್ಲಿ ಗೆಲುವು ಪಡೆಯಿತು.
2019: ಬಿಜೆಪಿ ಸ್ಪರ್ಧಿಸಿದ್ದ 164 ಕ್ಷೇತ್ರಗಳಲ್ಲಿ 105ರಲ್ಲಿ ಗೆಲುವು ಪಡೆದರೆ 124 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಶಿವಸೇನಾ 56ರಲ್ಲಿ ಜಯ ಸಾಧಿಸಿತು.
ಕಾಂಗ್ರೆಸ್– ಎನ್‌ಸಿಪಿ ಮೈತ್ರಿಯಲ್ಲಿ ಸೀಟು ಹಂಚಿಕೆ ವಿವರ
1999: ಒಂದಾಗಿ ಚುನಾವಣೆ ಎದುರಿಸಿದ ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳು ಕ್ರಮವಾಗಿ 75 ಮತ್ತು 58 ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚಿಸಿದವು.
2004: 172 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 69ರಲ್ಲಿ ಹಾಗೂ 114 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎನ್‌ಸಿಪಿ 71ರಲ್ಲಿ ಗೆಲುವಿನ ನಗೆ ಬೀರಿತ್ತು.
2009: ಹಿಂದಿನ ಸೀಟು ಹಂಚಿಕೆ ಸೂತ್ರವೇ ಮುಂದುವರಿಯಿತು. ಕಾಂಗ್ರೆಸ್ 82 ಮತ್ತು ಎನ್‌ಸಿಪಿ 62 ಕ್ಷೇತ್ರಗಳಲ್ಲಿ ಜಯ ಪಡೆಯಿತು.
2014: ಮೈತ್ರಿ ಮುರಿದು ಕಾಂಗ್ರೆಸ್ ಮತ್ತು ಎನ್‌ಸಿಪಿ ಪ್ರತ್ಯೇಕವಾಗಿ ಸ್ಪರ್ಧಿಸಿದವು. ಅವು ಕ್ರಮವಾಗಿ 42 ಮತ್ತು 41 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದವು.
2019: ಎನ್‌ಸಿಪಿ ಮತ್ತು ಕಾಂಗ್ರೆಸ್ ತಲಾ 125 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಕ್ರಮವಾಗಿ 54 ಮತ್ತು 44 ಕ್ಷೇತ್ರಗಳಲ್ಲಿ ಗೆದ್ದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.