ನವದೆಹಲಿ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ವೈ) ಅಡಿಯಲ್ಲಿ ದೇಶದಲ್ಲಿ ನಿರ್ಮಿಸಲಾಗಿರುವ ಹಲವು ರಸ್ತೆಗಳು ಕಳಪೆಯಾಗಿವೆ ಎಂದು ಸಂಸತ್ತಿನ ಸ್ಥಾಯಿ ಸಮಿತಿ ಗುರುವಾರ ಲೋಕಸಭೆಗೆ ತಿಳಿಸಿದೆ.
ಪಿಎಂಜಿಎಸ್‌ವೈ ಯೋಜನೆಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ, ಡಿಎಂಕೆ ಸಂಸದೆ ಕನಿಮೋಳಿ ನೇತೃತ್ವದ ಸ್ಥಾಯಿ ಸಮಿತಿ ಗುರುವಾರ ಲೋಕಸಭೆಯಲ್ಲಿ ತನ್ನ ವರದಿ ಮಂಡಿಸಿತು. ಭಾರತದ ಮಹತ್ವಾಕಾಂಕ್ಷಿ ಯೋಜನೆ ಪಿಎಂಜಿಎಸ್‌ವೈ ಅಡಿ ದೇಶದಲ್ಲಿ ನಿರ್ಮಾಣವಾಗಿರುವ ರಸ್ತೆಗಳ ಕಾಮಗಾರಿ ಗುಣಮಟ್ಟದಲ್ಲಿ ರಾಜಿಯಾಗಿದೆ. ಇದು ಒಪ್ಪತಕ್ಕದ್ದಲ್ಲ ಎಂದು ಸಮಿತಿ ಹೇಳಿತು.
ಈ ಯೋಜನೆಯಲ್ಲಿ ರಸ್ತೆಗಳು 20 ಎಂ.ಎಂನಷ್ಟು ಮಂದವಾಗಿರಬೇಕು ಎಂದು ಮಾನದಂಡ ನಿಗದಿ ಮಾಡಲಾಗಿದೆ. ಆದರೆ, ರಸ್ತೆಗಳು 30 ಎಂ.ಎಂನಷ್ಟು ಮಂದವಾಗಿರಬೇಕು ಎಂದು ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಪಿಎಂಜಿಎಸ್‌ವೈನ ಪರಿಣಾಮಕಾರಿ ಅನುಷ್ಠಾನಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಹಕಾರ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.
‘ರಸ್ತೆಗಳ ಗುಣಮಟ್ಟವು ಇಡೀ ಭಾರತವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ಕಳಪೆ ಕಾಮಗಾರಿಯು ಮಹಾತ್ವಾಕಾಂಕ್ಷೆಯ ಯೋಜನೆಗೆ ಮಸಿ ಬಳಿದಿದೆ. ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಆಗಿರುವ ರಾಜಿಯನ್ನು ಒಪ್ಪಲಾಗದು. ಇದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಬೇಕು’ ಎಂದು ಸಮಿತಿ ಆಗ್ರಹಿಸಿದೆ.
‘ಹಲವು ಕಡೆಗಳಲ್ಲಿ ರಸ್ತೆಗಳಿಗೆ ಕಳಪೆ ಸಾಮಗ್ರಿ ಬಳಸಲಾಗಿದೆ. ಹೀಗಾಗಿ ಒಂದು ಋತುವಿಗೂ ಬಾಳಿಕೆ ಬಾರದ ಸ್ಥಿತಿಯಲ್ಲಿವೆ. ವಾಹನ ದಟ್ಟಣೆಯನ್ನು ತಾಳಿಕೊಳ್ಳಲಾಗದಷ್ಟು ಕಳಪೆ ರಸ್ತೆಗಳನ್ನು ನಿರ್ಮಿಸಲಾಗಿದೆ. ಮುಂಗಾರಿನ ಋತುವಿನಲ್ಲೇ ರಸ್ತೆಗಳು ಕಿತ್ತುಹೋಗುವಂತಿವೆ’ ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿದೆ.
ಈ ಯೋಜನೆಯಲ್ಲಿ 2023ರ ಜನವರಿ 20ರ ವರೆಗೆ ₹2,269.631 ಕೋಟಿ ಬಳಕೆಯಾಗದೇ ಉಳಿದಿರುವ ಬಗ್ಗೆಯೂ ಸಮಿತಿ ಆತಂಕ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.