ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿಮಕ್ಕಳಿಗೆ ಬಸ್ ಇಳಿಯಲು ಬಿಡದೇ ಇರುವ ಖಾಸಗಿ ಬಸ್ ನಿರ್ವಾಹಕನೊಬ್ಬನಿಗೆ 10 ದಿನಗಳ ಕಾಲ ಮಕ್ಕಳ ಮನೆಯಲ್ಲಿ ಕೆಲಸ ಮಾಡುವಂತೆ ಸೂಚಿಸಿ ವಿಭಿನ್ನ ರೀತಿಯ ಶಿಕ್ಷೆ ನೀಡಲಾಗಿದೆ.
ಮಲಪ್ಪುರಂ ಜಿಲ್ಲಾಧಿಕಾರಿ ಜಫರ್ ಮಲಿಕ್ ಬಸ್ ನಿರ್ವಾಹಕನ ಮನಸ್ಸು ಬದಲಾಯಿಸಲಿ ಎಂಬ ಉದ್ದೇಶದಿಂದ ಈ ವಿಭಿನ್ನ ರೀತಿಯ ಶಿಕ್ಷೆ ವಿಧಿಸಿದ್ದಾರೆ. ಜುಲೈ 23ರಂದು ಪರಪ್ಪನಂಗಡಿಯಲ್ಲಿ ಎಂಬಲ್ಲಿ ಎಲ್‌ಕೆಜಿ ಕಲಿಯುತ್ತಿದ್ದ ಪುಟಾಣಿಯೊಬ್ಬ ಅಕ್ಕನೊಡನೆ ಖಾಸಗಿ ಬಸ್ಸು ಏರಿದ್ದ. ಅಕ್ಕ ತಮ್ಮ ಇಬ್ಬರೂ ಇಳಿಯಬೇಕಾದ ನಿಲ್ದಾಣ ಬಂದಾಗ, ಅಕ್ಕ ಇಳಿದ ಕೂಡಲೇ ಗಡಿಬಿಡಿ ಕಂಡಕ್ಟರ್ ಬಸ್ ಗೆ ರೈಟ್ ಹೇಳಿದ್ದ. ಪುಟ್ಟ ತಮ್ಮ ಬಸ್ಸು ಇಳಿಯುವ ಮುನ್ನವೇ ಬಸ್ಸು ಹೊರಟಿತ್ತು. ತುಂತುರು ಮಳೆಯಲ್ಲಿ ತಮ್ಮನ ಕಾಣದ ಅಕ್ಕ ಕಿರುಚಿಕೊಂಡಾಗ ಬಸ್ಸು ಸುಮಾರು 300 ಮೀಟರ್ ದೂರ ಹೋಗಿ ನಿಂತಿತು.
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಾಮಾಜಿಕ ಕಾರ್ಯಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದಿದ್ದರು. ಇದನ್ನು ನೋಡಿದ ಜಿಲ್ಲಾಧಿಕಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರಿಂದ ವರದಿ ಕೋರಿದ್ದರು. ತನಿಖೆ ನಡೆಸಿದ ಆರ್‌ಟಿಒ, ಬಸ್‌ನಿರ್ವಾಹಕ ಸಕೀರ್ ಆಲಿಯ ತಪ್ಪನ್ನು ಗುರುತಿಸಿದೆ. ಆರ್‌ಟಿಒ ವರದಿ ಆಧರಿಸಿ ಜಿಲ್ಲಾಧಿಕಾರಿ ಈ ಶಿಕ್ಷೆ ಪ್ರಕಟಿಸಿದ್ದಾರೆ.
ಥವನೂರಿನ ಸರ್ಕಾರಿ ಮಕ್ಕಳ ಮನೆಯಲ್ಲಿ ಸಕೀರ್ ಅಲಿ 10 ದಿನಗಳ ಕಾಲ ಕೆಲಸ ಮಾಡುವಂತೆ ಸೂಚಿಸಲಾಗಿದ್ದು, ಮಕ್ಕಳ ಮನಸ್ಸನ್ನು ಅರಿಯಲು ಇದೊಂದು ಅವಕಾಶವಾಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.