ADVERTISEMENT

ರಾಮ ಮಂದಿರ ವಿರುದ್ಧ ಜನಾಭಿಪ್ರಾಯಕ್ಕೆ ಕಾಂಗ್ರೆಸ್‌ ಯತ್ನ: ಬಿಜೆಪಿ ಆರೋಪ

ವಿವಾದ ಸೃಷ್ಟಿಸಿದ ಶಶಿ ತರೂರ್‌ ಹೇಳಿಕೆ

ಪಿಟಿಐ
Published 15 ಅಕ್ಟೋಬರ್ 2018, 14:02 IST
Last Updated 15 ಅಕ್ಟೋಬರ್ 2018, 14:02 IST
ಶಶಿ ತರೂರ್ (ಸಂಗ್ರಹ ಚಿತ್ರ)
ಶಶಿ ತರೂರ್ (ಸಂಗ್ರಹ ಚಿತ್ರ)   

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ವಿರುದ್ಧ ಜನಾಭಿಪ್ರಾಯ ರೂಪಿಸಲುಕಾಂಗ್ರೆಸ್‌ ಪಕ್ಷವು ಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದು, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಿಂದೂವೇ ಎಂದು ಪ್ರಶ್ನಿಸಿದೆ.

ಬೇರೊಬ್ಬರ ಪ್ರಾರ್ಥನಾ ಸ್ಥಳವನ್ನು ನಾಶ ಮಾಡಿ ಅಲ್ಲಿ ರಾಮ ಮಂದಿರ ನಿರ್ಮಿಸುವುದನ್ನು ಒಳ್ಳೆಯ ಹಿಂದೂಗಳು ಬಯಸುವುದಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಬಿಜೆಪಿ ಈ ಪ್ರತಿಕ್ರಿಯೆ ನೀಡಿದೆ.

ರಾಮ ಮಂದಿರ–ಬಾಬರಿ ಮಸೀದಿ ನಿವೇಶನ ವಿವಾದಕ್ಕೆ ಸಂಬಂಧಿಸಿ ಆದಷ್ಟು ಬೇಗ ಸುಪ್ರೀಂ ಕೋರ್ಟ್‌ ತೀರ್ಪು ಬರಬೇಕು ಎಂದು ಬಿಜೆಪಿ ಬಯಸುತ್ತಿದೆ. ಆದರೆ ತೀರ್ಪನ್ನು ವಿಳಂಬ ಮಾಡಲು ಏನೆಲ್ಲ ಬೇಕೋ ಅದನ್ನೆಲ್ಲ ಕಾಂಗ್ರೆಸ್ ಮಾಡುತ್ತಿದೆ ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್‌. ನರಸಿಂಹ ರಾವ್‌ ಹೇಳಿದ್ದಾರೆ.

ADVERTISEMENT

ಪ್ರಕರಣದ ವಿಚಾರಣೆಯನ್ನು ವಿಳಂಬ ಮಾಡುವುದಕ್ಕಾಗಿಯೇ ಕಾಂಗ್ರೆಸ್‌ ಮುಖಂಡರೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ದಶಕಗಳ ಹಿಂದೆ ನಡೆದ ‘ವಿವಾದಾತ್ಮಕ ಕಟ್ಟಡದ ಧ್ವಂಸ’ದ ವಿಚಾರವನ್ನು ರಾಮ ಮಂದಿರ ನಿರ್ಮಾಣಕ್ಕೆ ತಳಕು ಹಾಕುವವರ ಸಾಲಿಗೆ ಈಗ ಶಶಿ ತರೂರ್‌ ಅವರೂ ಸೇರಿದ್ದಾರೆ ಎಂದು ರಾವ್‌ ಹೇಳಿದ್ದಾರೆ.

ಭವ್ಯ ರಾಮ ಮಂದಿರ ನಿರ್ಮಾಣವಾಗಬೇಕು ಎಂಬುದು ಬಿಜೆಪಿಯ ಆಕಾಂಕ್ಷೆ. ಅದಕ್ಕಾಗಿ‍ಸುಪ್ರೀಂ ಕೋರ್ಟ್‌ ತೀರ್ಪಿಗೆ ಬಿಜೆಪಿ ಕಾಯುತ್ತದೆ. ಈ ವಿಚಾರದಲ್ಲಿ ನಿಲುವು ಏನು ಎಂಬುದನ್ನು ರಾಹುಲ್‌ ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಾಂಗ್ರೆಸ್‌ ಪಕ್ಷವು ಮತ ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ. ತಮ್ಮದು ಮುಸ್ಲಿಂ ಪಕ್ಷ ಎಂದು ರಾಹುಲ್‌ ಒಮ್ಮೆ ಹೇಳಿದ್ದರು. ತಾವು ಶಿವಭಕ್ತ ಎಂದು ಬಿಂಬಿಸಲು ರಾಹುಲ್‌ ಯತ್ನಿಸುತ್ತಿದ್ದಾರೆ. ಆದರೆ ಅವರು ಹಿಂದೂ ಹೌದೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ರಾವ್‌ ಸವಾಲು ಎಸೆದಿದ್ದಾರೆ.

ಕಾಂಗ್ರೆಸ್‌ ಪಕ್ಷವು ದ್ವಿಮುಖ ಕಾರ್ಯತಂತ್ರ ಅನುಸರಿಸುತ್ತಿದೆ. ರಾಹುಲ್‌ ಅವರ ವಿಭಜನಕಾರಿ ಮನಸ್ಥಿತಿಯ ಭಾಗವಾಗಿ ಭಾರತವನ್ನು ಒಡೆಯಲು ಯತ್ನಿಸುತ್ತಿದೆ. ‘ದಕ್ಷಿಣ ಭಾರತಕ್ಕಿಂತ ಪಾಕಿಸ್ತಾನವೇ ಮೇಲು’ ಎಂದು ಪಂಜಾಬ್‌ನ ಸಚಿವ ನವಜೋತ್‌ ಸಿಂಗ್‌ ಸಿಧು ಅವರ ಹೇಳಿಕೆಯೇ ಇದಕ್ಕೆ ನಿದರ್ಶನ. ಸಿಧು ಅವರು ಒಂದು ವಾರದಲ್ಲಿ ರಾಜೀನಾಮೆ ನೀಡದಿದ್ದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ರಾವ್‌ ಹೇಳಿದ್ದಾರೆ.

ತರೂರ್‌ ಹೇಳಿದ್ದೇನು?

‘ರಾಮ ಅದೇ ಸ್ಥಳದಲ್ಲಿ (ಅಯೋಧ್ಯೆ) ಜನಿಸಿದ್ದ ಎಂದು ಬಹುಸಂಖ್ಯೆಯ ಹಿಂದೂಗಳು ಭಾವಿಸಿದ್ದಾರೆ ಎಂಬುದು ಒಬ್ಬ ಹಿಂದೂ ಆಗಿ ನನಗೆ ಗೊತ್ತಿದೆ. ರಾಮ ಹುಟ್ಟಿದ್ದಾನೆ ಎನ್ನಲಾಗುವ ಸ್ಥಳದಲ್ಲಿಯೇ ರಾಮ ಮಂದಿರ ನಿರ್ಮಾಣ ಆಗಬೇಕು ಎಂದು ಹೆಚ್ಚಿನ ಹಿಂದೂಗಳು ಬಯಸುತ್ತಿದ್ದಾರೆ. ಆದರೆ, ಬೇರೊಬ್ಬರ ಪ್ರಾರ್ಥನಾ ಸ್ಥಳವನ್ನು ಧ್ವಂಸ ಮಾಡಿ ಅಲ್ಲಿ ರಾಮ ಮಂದಿರ ನಿರ್ಮಿಸುವುದನ್ನು ಒಳ್ಳೆಯ ಹಿಂದೂಗಳು ಬಯಸುವುದಿಲ್ಲ’ ಎಂದು ಚೆನ್ನೈನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ತರೂರ್‌ ಹೇಳಿದ್ದರು.

ತರೂರ್‌ ಹೇಳಿಕೆಯೊಂದಿಗೆ ಯಾವುದೇ ಸಂಬಂಧ ಇಲ್ಲ ಎಂದು ಕಾಂಗ್ರೆಸ್‌ ಪಕ್ಷ ಹೇಳಿದೆ.

****

ಇದು ವೈಯಕ್ತಿಕ ಅಭಿಪ್ರಾಯ. ಸಾಹಿತ್ಯ ಉತ್ಸವದಲ್ಲಿ ವೈಯಕ್ತಿಕ ಅಭಿಪ್ರಾಯ ಕೇಳಿದ್ದರು. ನಾನು ಕಾಂಗ್ರೆಸ್‌ ಪಕ್ಷದ ವಕ್ತಾರ ಅಲ್ಲ, ಪಕ್ಷದ ಪರವಾಗಿ ಮಾತನಾಡುತ್ತಿದ್ದೇನೆ ಎಂದು ಹೇಳಿಕೊಳ್ಳುವುದೂ ಇಲ್ಲ

ಶಶಿ ತರೂರ್‌, ಕಾಂಗ್ರೆಸ್‌ ಮುಖಂಡ

ಹಿಂದೂಗಳ ಬಗ್ಗೆ ಮಾತನಾಡಲು ತರೂರ್‌ಗೆ ಅಧಿಕಾರವೇ ಇಲ್ಲ. ಹಿಂದೂ ಧರ್ಮಕ್ಕೆ ಸಂಬಂಧವೇ ಇಲ್ಲದ ರೀತಿಯಲ್ಲಿ ಅವರು ಬದುಕಿದ್ದಾರೆ. ಅವರು ಸಮತೋಲನ ಕಳೆದುಕೊಂಡಿದ್ದಾರೆ

– ಸುಬ್ರಮಣಿಯನ್‌ ಸ್ವಾಮಿ, ಬಿಜೆಪಿ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.