ADVERTISEMENT

ಕಾಂಗ್ರೆಸ್‌ ಅಧ್ಯಕ್ಷರ ಚುನಾವಣೆ ಕೆಲ ವಾರ ಮುಂದಕ್ಕೆ?

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 15:56 IST
Last Updated 26 ಆಗಸ್ಟ್ 2022, 15:56 IST
   

ನವದೆಹಲಿ: ಸೆಪ್ಟೆಂಬರ್‌ 20ಕ್ಕೆ ಕೊನೆಗೊಳ್ಳಲಿದ್ದ ಕಾಂಗ್ರೆಸ್ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆ ‘ಭಾರತ್‌ ಜೋಡೊ ಯಾತ್ರಾ’ ಸಲುವಾಗಿ ಕೆಲವು ವಾರಗಳು ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಮೂಲಗಳು ಗುರುವಾರ ತಿಳಿಸಿವೆ.

ಪಕ್ಷದ ನೀತಿ ನಿರ್ಧಾರ ಕೈಗೊಳ್ಳುವ ಉನ್ನತ ಸಮಿತಿಯಾದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ಭಾನುವಾರ ವರ್ಚುವಲ್‌ ಮೂಲಕ ನಡೆಯಲಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಸಭೆ, ಪಕ್ಷದ ಅಧ್ಯಕ್ಷರ ಚುನಾವಣೆಯ ನಿಗದಿತ ವೇಳಾಪಟ್ಟಿ ಅನುಮೋದಿಸಲಿದೆ.

12 ರಾಜ್ಯಗಳನ್ನು ಆವರಿಸಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,570 ಕಿ.ಮೀ ನಡೆಯಲಿರುವಭಾರತ್‌ ಜೋಡೊ ಯಾತ್ರಾ ಸಿದ್ಧತೆಯಲ್ಲಿರುವ ಕಾಂಗ್ರೆಸ್‌ ಪಕ್ಷದ ಕೆಲವು ರಾಜ್ಯ ಘಟಕಗಳು ಇನ್ನೂ ಔಪಚಾರಿಕವಾಗಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ಹೀಗಾಗಿ ಎಐಸಿಸಿ ಅಧ್ಯಕ್ಷರ ಆಯ್ಕೆ ಚುನಾವಣೆ ಕೆಲವು ವಾರ ಮುಂದಕ್ಕೆ ಹೋಗಲಿದೆ. ಆದರೆ, ಅಕ್ಟೋಬರ್‌ ಅಂತ್ಯದೊಳಗೆ ಪಕ್ಷವು ಪೂರ್ಣಾವಧಿ ಅಧ್ಯಕ್ಷರನ್ನು ಹೊಂದಲಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಏಪ್ರಿಲ್‌ 16ರಿಂದ ಮೇ 31ರವರೆಗೆ ಬ್ಲಾಕ್‌ ಸಮಿತಿಗಳಿಗೆ ಮತ್ತುಪ್ರದೇಶ ಕಾಂಗ್ರೆಸ್ ಸಮಿತಿಗಳ ತಲಾ ಒಬ್ಬ ಸದಸ್ಯರ ಆಯ್ಕೆ ಚುನಾವಣೆ,ಜೂನ್‌ 1 ಮತ್ತು ಜುಲೈ 20ರ ನಡುವೆ ಜಿಲ್ಲಾ ಸಮಿತಿಗಳ ಮುಖ್ಯಸ್ಥರ ಆಯ್ಕೆ, ಜುಲೈ 21 ಮತ್ತು ಆಗಸ್ಟ್ 20ರ ನಡುವೆ ಪ್ರದೇಶ ಕಾಂಗ್ರೆಸ್‌ ಸಮಿತಿ ಮುಖ್ಯಸ್ಥರು ಮತ್ತು ಎಐಸಿಸಿ ಸದಸ್ಯರ ಆಯ್ಕೆ ಹಾಗೂ ಆಗಸ್ಟ್ 21 ಮತ್ತು ಸೆಪ್ಟೆಂಬರ್‌ 20ರ ನಡುವೆ ಎಐಸಿಸಿ ಅಧ್ಯಕ್ಷರಚುನಾವಣೆ ನಡೆಸಲು ಸಿಡಬ್ಲ್ಯೂಸಿ ನಿರ್ಧರಿಸಿತ್ತು.ಈ ವೇಳಾಪಟ್ಟಿಯನ್ನು ಪಕ್ಷವು ಕಳೆದ ವರ್ಷದ ಅಕ್ಟೋಬರ್‌ನಲ್ಲಿಯೇ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.