ನವದೆಹಲಿ: ಮೇ 30ರಿಂದ ಎರಡು ದಿನಗಳ ಕಾಲ ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕದ ಬಳಿ ಧ್ಯಾನ ಪೀಠಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಧ್ಯಾನ ಕಾರ್ಯಕ್ರಮ ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮೋದಿ ಧ್ಯಾನದ ಸಮಯದಿಂದ 48 ಗಂಟೆಗಳ ನಂತರ(ಜೂನ್ 1) ಅಂತಿಮ ಹಂತದ ಲೋಕಸಭೆ ಚುನಾವಣೆ ನಡೆಯಲಿದ್ದು, ಈ ಮೂಲಕ ಮೋದಿ ಸಂದರ್ಭದ ಲಾಭ ಪಡೆಯಲು ಮುಂದಾಗಿದ್ದಾರೆ. ಇದು ಚುನಾವಣೆಯ ಪೂರ್ವ ಅವಧಿಯ(silence period) ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಮೋದಿ ಧ್ಯಾನದ ದೃಶ್ಯಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ನಿರ್ಬಂಧ ಹೇರುವಂತೆ ಕೋರಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.
ರಣದೀಪ್ ಸಿಂಗ್ ಸುರ್ಜೇವಾಲಾ, ಅಭಿಷೇಕ್ ಸಿಂಘ್ವಿ ಮತ್ತು ಸೈಯದ್ ನಾಸಿರ್ ಹುಸೇನ್ ಅವರನ್ನೊಳಗೊಂಡ ಕಾಂಗ್ರೆಸ್ ನಿಯೋಗವು ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ, ಬಿಜೆಪಿಯಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ದೂರು ಸಲ್ಲಿಸಿದೆ.
ಸ್ವತಃ ನರೇಂದ್ರ ಮೋದಿ ಸ್ಪರ್ಧಿಸಿರುವ ವಾರಾಣಸಿ ಸೇರಿದಂತೆ ವಿವಿಧೆಡೆ ಜೂನ್ 1ರಂದು ಮತದಾನ ನಡೆಯಲಿದ್ದು, ತಟಸ್ಥ ಅವಧಿಯಲ್ಲಿ ಮೋದಿ ಧ್ಯಾನ ಕಾರ್ಯಕ್ರಮ ನಡೆಸುತ್ತಿರುವುದು ಜನ ಪ್ರತಿನಿಧಿಗಳ ಕಾಯ್ದೆ ಅಡಿ ಮಾದರಿ ನೀತಿಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ನರೇಂದ್ರ ಮೋದಿ ಪ್ರವಾಸದ ಕುರಿತಂತೆ ಮೇ 28ರಂದು ಹಲವು ಸುದ್ದಿವಾಹಿನಿಗಳು ವರದಿ ಪ್ರಸಾರ ಮಾಡಿವೆ ಎಂದೂ ಕಾಂಗ್ರೆಸ್ ಗಮನ ಸೆಳೆದಿದೆ.
ಅದಲ್ಲದೆ, ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಯಾವುದನ್ನು ಮಾಡಬೇಕು? ಮತ್ತು ಯಾವುದನ್ನು ಮಾಡಬಾರದು? ಎಂದು ಚುನಾವಣಾ ಆಯೋಗ ಹೊರಡಿಸಿರುವ ಆದೇಶಗಳಿಗೆ ಮೋದಿ ಪ್ರವಾಸ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
‘ಮೇ 30ರ ಸಂಜೆ ಮೋದಿ ಧ್ಯಾನ ಆರಂಭಿಸಲಿದ್ದಾರೆ. ಮೇ 30ರಂದು ಚುನಾವಣಾ ಪೂರ್ವ ಅವಧಿ ಪ್ರಾರಂಭವಾಗಲಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ ಅವರು ಮಾಡಿರುವ ಘೋಷಣೆ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಈ ಬಗ್ಗೆ ನಾವು ದೂರು ನೀಡಿದ್ದೇವೆ’ಎಂದು ಕಾಂಗ್ರೆಸ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.