ADVERTISEMENT

ಮೋದಿ ಸರ್ಕಾರದ ಚೀನಾ ನೀತಿ ಬಗ್ಗೆ ಕಾಂಗ್ರೆಸ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 6 ಮೇ 2024, 13:38 IST
Last Updated 6 ಮೇ 2024, 13:38 IST
ಜೈರಾಮ್‌ ರಮೇಶ್
ಜೈರಾಮ್‌ ರಮೇಶ್   

ನವದೆಹಲಿ: ಚೀನಾದಿಂದ ಭಾರತದ ಪ್ರದೇಶಗಳ ಅತಿಕ್ರಮಣ ವಿಚಾರವಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಸೋಮವಾರ ವಾಗ್ದಾಳಿ ನಡೆಸಿದೆ.

ಡೆಪ್ಸಾಂಗ್‌ ಮತ್ತು ಡೆಮ್‌ಚೋಕ್‌ ಪ್ರದೇಶದ ಸಾವಿರಾರು ಚದರ ಕಿಲೋ ಮೀಟರ್‌ ಪ್ರದೇಶವನ್ನು ಚೀನಾಕ್ಕೆ ಒಪ್ಪಿಸಲಾಗಿದೆಯೇ ಅಥವಾ 2020ರ ಮೇ 5ಕ್ಕಿಂತ ಮುಂಚೆ ಇದ್ದ ಸ್ಥಿತಿಗೆ ಒಯ್ಯಲು ಈಗಲೂ ಪ್ರಯತ್ನಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದೆ.

’ಪೂರ್ವ ಲಡಾಖ್‌ನ ತ್ಸೊ ಪ್ಯಾಗಾಂಗ್‌ನಲ್ಲಿ ಭಾರತ–ಚೀನಾ ಸೈನಿಕರ ಮಧ್ಯೆ ನಡೆದ ಸಂಘರ್ಷಕ್ಕೆ ನಾಲ್ಕು ವರ್ಷಗಳು ಪೂರ್ಣಗೊಂಡಿದ್ದು, ಚೀನಾ ನೀತಿ ವಿಫಲಗೊಂಡಿದ್ದರ ಹೊಣೆಗಾರಿಕೆಯನ್ನು ಯಾವಾಗ ತೆಗೆದುಕೊಳ್ಳುತ್ತೀರಿ‘ ಎಂದು ಪ್ರಧಾನಿ ಮೋದಿ ಅವರನ್ನು ಕೇಳಿದೆ.

ADVERTISEMENT

ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ಅವರು ‘ಎಕ್ಸ್‌’ನಲ್ಲಿ ‘ಭಾರತದ ಅತಿ ದೊಡ್ಡ ಗುಪ್ತಚರ ಮತ್ತು ಕಾರ್ಯತಂತ್ರದ ವಿಫಲತೆಗೆ ಹೊಣೆ ಯಾರು’ ಎಂದು ಪ್ರಶ್ನಿಸಿದ್ದಾರೆ.

‘20 ಸೈನಿಕರು ಹತರಾದ ನಂತರ 2020ರ ಜೂನ್‌ 19ರಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಭಾರತದ ಗಡಿಯೊಳಗೆ ಯಾರೂ ಪ್ರವೇಶಿಸಿಲ್ಲ ಅಥವಾ ನಮ್ಮ ಪ್ರದೇಶವನ್ನು ಯಾರೂ ಅತಿಕ್ರಮಿಸಿಲ್ಲ’ ಎಂದು ಹೇಳಿದ್ದರು. ಈ ಮೂಲಕ ದೇಶಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಅವಮಾನ ಮಾಡಿದ್ದರು’ ಎಂದು ಹೇಳಿದ್ದಾರೆ.

ಈ ಘಟನೆ ನಡೆದ ಬಳಿಕ ನಾಲ್ಕು ವರ್ಷಗಳಲ್ಲಿ 21 ಸುತ್ತಿನ ಮಾತುಕತೆ ನಡೆದರೂ ಆ ಪ್ರದೇಶದಲ್ಲಿ ಪರಿಸ್ಥಿತಿ ನಮ್ಮ ಪರವಾಗಿಲ್ಲ. ಚೀನಾದ ಅತಿಕ್ರಮಣ ಮುಂದುವರಿದಿದೆ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.