ನವದೆಹಲಿ: ಮುಜಪ್ಫರಪುರ ಬಾಲಿಕಾ ಗೃಹ (ಶೆಲ್ಟರ್ ಹೋಮ್) ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವಮಾಜಿ ಸಚಿವೆ, ಮಂಜು ವರ್ಮಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡಲು ಮಿತ್ರ ಪಕ್ಷ ಜೆಡಿಯು ಮೇಲೆ ಬಿಜೆಪಿ ಒತ್ತಡ ಹೇರುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ಇದನ್ನೂ ಓದಿ:ಬಿಹಾರ ಬಾಲಿಕಾಗೃಹದ ಬೀಭತ್ಸಗಳು!
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮುಜಫ್ಫರಪುರ ಬಾಲಿಕಾ ಗೃಹ ಲೈಂಗಿಕ ದೌರ್ಜನ್ಯ ಹಗರಣದ ಪ್ರಮುಖ ಆರೋಪಿ ಬ್ರಜೇಶ್ ಠಾಕೂರ್ ಜೊತೆಗೆ ಮಂಜು ವರ್ಮಾ ಅವರ ಪತಿ ಚಂದೇಶ್ವರ ವರ್ಮ ನಿಕಟ ಸಂಬಂಧ ಹೊಂದಿರುವ ಸಂಗತಿ 2018ರಲ್ಲಿಹಿಂದೆ ಬಯಲಾಗಿತ್ತು. ಅದಾಗಲೇ ನಿತೀಶ್ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಮಂಜು ವರ್ಮಾ ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಹೀಗಿದ್ದರೂ, ಬಿಹಾರದ ಚೆರಿಯಾ-ಬರಿಯಾರ್ಪುರ ಕ್ಷೇತ್ರದಿಂದ ಸ್ಪರ್ಧಿಸಲು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮಂಜು ವರ್ಮಾ ಅವರಿಗೆ ಈ ಬಾರಿ ಟಿಕೆಟ್ ನೀಡಿದೆ. ಈ ಬೆಳವಣಿಗೆಯನ್ನು ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಖಂಡಿಸಿದ್ದಾರೆ.
‘ಬಿಜೆಪಿ-ಜೆಡಿಯು ಮೈತ್ರಿ ಕೂಟವು ವರ್ಮಾ ಅವರು ಸ್ಪರ್ಧೆ ಮಾಡದಂತೆ ತಡೆಯಬೇಕು. 'ಬೇಟಿ ಬಚಾವೊ, ಬೇಟಿ ಪಡಾವೊ' ಎಂದು ಯಾವಾಗಲೂ ಹೇಳುವ (ಪ್ರಧಾನಿ) ನರೇಂದ್ರ ಮೋದಿ ಅವರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಸುಶ್ಮಿತಾ ದೇವ್ ಹೇಳಿದ್ದಾರೆ.
‘ಒಂದು ವೇಳೆ ಮಹಿಳಾ ಸುರಕ್ಷತೆ ಬಗ್ಗೆ ಬಿಜೆಪಿ ನಿಲುವು ದೃಢವಾಗಿದ್ದರೆ ಈ ವಿಚಾರವಾಗಿ ಜೆಡಿಯು ಜೊತೆಗಿನ ಮೈತ್ರಿಯನ್ನು ಕಡಿದುಕೊಳ್ಳಬೇಕು. ಅಥವಾ ಜೆಡಿಯು ವರ್ಮಾ ಅವರ ಟಿಕೆಟ್ ಹಿಂಪಡೆಯುವಂತೆ ಮಾಡಬೇಕು,’ ಎಂದು ಸುಶ್ಮಿತಾದೇವ್ ಬಿಜೆಪಿಗೆ ಸವಾಲು ಹಾಕಿದ್ದಾರೆ.
ಮಹಿಳೆಯರ ಮೇಲಿನ ಅಪರಾಧಗಳ ವಿಷಯದಲ್ಲಿ ಪ್ರಧಾನಿ ತಮ್ಮ ದೃಢತೆಯನ್ನು ಸಾಬೀತು ಮಾಡಬೇಕು ಎಂದೂ ಸುಶ್ಮಿತಾ ದೇವ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.