ADVERTISEMENT

ಚುನಾವಣಾ ಬಾಂಡ್‌ ಹಗರಣ | ಸಚಿವೆ ನಿರ್ಮಲಾ ರಾಜೀನಾಮೆ ನೀಡಲಿ: ಕಾಂಗ್ರೆಸ್‌

ಪಿಟಿಐ
Published 29 ಸೆಪ್ಟೆಂಬರ್ 2024, 12:51 IST
Last Updated 29 ಸೆಪ್ಟೆಂಬರ್ 2024, 12:51 IST
<div class="paragraphs"><p>ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹಾಗೂ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ನವದೆಹಲಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದರು </p></div>

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹಾಗೂ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ನವದೆಹಲಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದರು

   

–ಪಿಟಿಐ ಚಿತ್ರ

ನವದೆಹಲಿ: ‘ಚುನಾವಣಾ ಬಾಂಡ್‌ ಮೂಲಕ ಸುಲಿಗೆ ಮಾಡಿದ್ದಾರೆ’ ಎಂದು ಆರೋಪಿಸಿ ನೀಡಿದ್ದ ದೂರಿನ ಅನ್ವಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಿರುದ್ಧ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಾಗಿದ್ದು ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಭಾನುವಾರ ಒತ್ತಾಯಿಸಿದೆ.

ADVERTISEMENT

ಈ ಬಗ್ಗೆ ಕಾಂಗ್ರೆಸ್‌ ವಕ್ತಾರ, ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ಇಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ‘ಬಿಜೆಪಿಯು ಪ್ರಜಾಪ್ರಭುತ್ವವನ್ನು ಕಡೆಗಣಿಸಿದೆ. ಇಬಿಎಸ್‌ (ಎಲೆಕ್ಟೋರಲ್‌ ಬಾಂಡ್‌ ಸ್ಕೀಮ್‌) ಎಂದರೆ, ಎಕ್ಸ್‌ಟಾರ್ಷನ್‌ ಬಿಜೆಪಿ ಸ್ಕೀಮ್‌ (ಬಿಜೆಪಿಯ ಸುಲಿಗೆ ಯೋಜನೆ)’ ಎಂದು ಅಭಿಷೇಕ್‌ ಮನು ಸಿಂಘ್ವಿ ಲೇವಡಿ ಮಾಡಿದರು.

‘ಚುನಾವಣಾ ಬಾಂಡ್‌ಗಳ ಮೂಲಕ ನಾಲ್ಕು ರೀತಿಯಲ್ಲಿ ಸುಲಿಗೆ ಮಾಡುವ ಪಿತೂರಿ ಮಾಡಲಾಗಿತ್ತು. ಅವುಗಳೆಂದರೆ: ಅನುಕೂಲ ಮಾಡಿಕೊಡುವ ಮುಂಚೆ ಮಾಡುವ ಸುಲಿಗೆ, ಅನುಕೂಲ ಮಾಡಿಕೊಟ್ಟ ಮೇಲೆ ಸುಲಿಗೆ ಮಾಡುವುದು, ಇ.ಡಿ, ಐ.ಟಿ ದಾಳಿಗೂ ಮುನ್ನ ಮಾಡುವ ಸುಲಿಗೆ, ನಕಲಿ ಕಂಪನಿಗಳ ಮೂಲಕ ಮಾಡುವ ಸುಲಿಗೆ. ಹೀಗೆ ವಿವಿಧ ರೀತಿಯಲ್ಲಿ ಉದ್ಯಮಿಗಳಿಂದ ಸುಲಿಗೆ ಮಾಡಲಾಗಿದೆ’ ಎಂದು ಜೈರಾಮ್‌ ರಮೇಶ್‌ ಹೇಳಿದರು.

‘ಈ ಯೋಜನೆ ಕುರಿತು ಸುಪ್ರೀಂ ಕೋರ್ಟ್‌ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ನಡೆಯಬೇಕು ಎಂದು ನಾವು ಬಹಳ ಹಿಂದಿನಿಂದಲೇ ಆಗ್ರಹಿಸಿದ್ದೇವೆ. ಈಗಲೂ ಇದೇ ರೀತಿಯ ಒತ್ತಾಯ ಮಾಡುತ್ತೇವೆ. ಬೆಂಗಳೂರಿನಲ್ಲಿ ದಾಖಲಾದ ದೂರಿಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ’ ಎಂದರು.

ರಾಜಕೀಯವಾಗಿ ಕಾನೂನಾತ್ಮಕವಾಗಿ ಹಾಗೂ ನೈತಿಕವಾಗಿ ಹೊಣೆ ಹೊತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
-ಜೈರಾಮ್‌ ರಮೇಶ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ
ಸಚಿವೆ ಒಬ್ಬರೇ ಹೀಗೆ ಮಾಡಲು ಸಾಧ್ಯವಿಲ್ಲ. ಇಲ್ಲಿ ನಂ.1 ಯಾರು ನಂ.2 ಯಾರು ಮತ್ತು ಯಾರ ನಿರ್ದೆಶನದಲ್ಲಿ ಈ ರೀತಿ ಸುಲಿಗೆ ಮಾಡಲಾಗಿದೆ ಎಂಬುದು ನಮಗೆ ತಿಳಿದಿದೆ.
-ಅಭಿಷೇಕ್‌ ಮನು ಸಿಂಘ್ವಿ, ಕಾಂಗ್ರೆಸ್‌ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.